ಬೆಂಗಳೂರು: ಸದ್ಯಕ್ಕೆ ನಾನು ರಾಜಕಾರಣವೇ ಸಾಕು ಅಂತಿದ್ದೀನಿ. ನೀವು ನೋಡಿದರೆ ನನ್ನ ಉತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ. ಉತ್ತರವೋ? ದಕ್ಷಿಣವೋ? ಪೂರ್ವವೋ? ಪಶ್ಚಿಮವೋ ? ಯಾವುದೋ ಏನೋ ನನಗೆ ಗೊತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಕ್ಷೇತ್ರ ಬದಲಾವಣೆ ಮಾಡುವ ಚರ್ಚೆ ನಡೆದಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಈ ಉತ್ತರ ನೀಡಿದ ಅವರು ನನ್ನನ್ನು ರಾಜಕೀಯವಾಗಿ ಬೆಳೆಸುತ್ತಿರುವವರ ತೀರ್ಮಾನವೇ ಅಂತಿಮ. ರಾಜ್ಯ ರಾಜಕಾರಣ ರಾಷ್ಟ್ರ ರಾಜಕಾರಣ ಎಲ್ಲ ಒಂದೇ ಅಲ್ಲವೇ ಎಂದು ಹೊಸ ಚರ್ಚೆಗೂ ನಾಂದಿ ಹಾಡಿದರು.
ನಾನು ರಾಜಕೀಯಕ್ಕೆ ಬಂದು ಹತ್ತು ವರ್ಷ ಆಗಿಹೋಗಿದೆ, ಸರ್ಕಾರ ನಮ್ಮದೇ ಇರಬಹುದು. ಆದರೆ ನಾನು ಜನರ ಸೇವೆ ಮಾಡಬೇಕು. ಹಾಗೆಂದು ಸಂಸದನಾಗಿಯೇ ಕೆಲಸ ಮಾಡಬೇಕು ಅಂತೇನಿಲ್ಲ. ಸಂಸದನಾಗಿ ಮಾಡಬೇಕಾದರೆ ಜವಾಬ್ದಾರಿ ಇರುತ್ತದೆ. ಕಾರ್ಯಕರ್ತನಾಗಿ ಖುಷಿ ಇರುತ್ತದೆ. ಎಂಪಿಗಿಂತ ಕಾರ್ಯಕರ್ತರ ಸ್ಥಾನವೇ ಬಹಳ ಪ್ರಮುಖ ಸ್ಥಾನ ಎಂದರು.
ಆಪರೇಷನ್ ಹಸ್ತ ಕುರಿತು ಪ್ರತಿಕ್ರಿಯೆ ನೀಡಿ, ನನಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಅಧಿಕಾರದಲ್ಲಿದ್ದಾಗ ಬೇರೆ ಪಕ್ಷದವರು ಸೇರಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ನಮ್ಮ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಇದೆ. ಸಾಕಷ್ಟು ಜನ ಕ್ಷೇತ್ರದ ಕೆಲಸಕ್ಕಾಗಿ ನಮ್ಮ ಬಳಿ ಬರುತ್ತಿರುತ್ತಾರೆ. ನಿರೀಕ್ಷೆಯೊಂದಿಗೆ ಬರುವವರ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ನಾವು ಯಾರನ್ನೂ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿಲ್ಲ. ಎಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆಯೋ ಅಲ್ಲಿ ಸಂಘಟನೆ ಗಟ್ಟಿ ಮಾಡಬೇಕಿದೆ ಹೇಳಿದರು.
ಪಕ್ಷ ಸದೃಢ ಮಾಡಿ ಅಂತ ಅಧ್ಯಕ್ಷರು, ವರಿಷ್ಠರು ಸೂಚಿಸಿದ್ದಾರೆ, ಎಲ್ಲೆಲ್ಲಿ ಪಕ್ಷ ಕೊರತೆ ಎದುರಿಸುತ್ತಿದೆಯೋ ಆ ಕ್ಷೇತ್ರಗಳಲ್ಲಿ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.