ನ್ಯೂಸ್

ಮಗನನ್ನು ಬಿಡಿಸಲು ಬಂದ ಮಹಿಳೆಯನ್ನು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಪೊಲೀಸರು! ವಿಡಿಯೋ ವೈರಲ್​

ಭೋಪಾಲ್​: ಪೊಲೀಸ್​ ಅಧಿಕಾರಿಗಳು​ ಕಾರಿನ ಬಾನೆಟ್​ ಮೇಲೆ ಮಹಿಳೆಯೊಬ್ಬರನ್ನು ಸುಮಾರು 500 ಮೀಟರ್​​ವರೆಗೆ ಎಳೆದೊಯ್ದ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಡ್ರಗ್ಸ್​ ಸ್ಮಗ್ಲಿಂಗ್​ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಮಗನನ್ನು ಬಿಡಿಸಲು ಯತ್ನಿಸಿದ ವೇಳೆ ಈ ಘಟನೆ ನಡೆದಿದೆ. ಮಹಿಳೆಯನ್ನು ಕಾರಿನಲ್ಲಿ ಎಳದೊಯ್ದ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ, ಅಧಿಕಾರಿಗಳನ್ನು ಅಮಾನತು ಮಾಡಿರುವ ನರಸಿಂಗಪುರ ಪೊಲೀಸ್​ ವರಿಷ್ಠಾಧಿಕಾರಿ, ವಿಭಾಗೀಯ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಈ ಘಟನೆ ಸೋಮವಾರ ಸಂಜೆ ನಡೆದಿದೆ. ವರದಿಯ ಪ್ರಕಾರ, ನರಸಿಂಗಪುರ ಜಿಲ್ಲೆಯ ಗೋಟೆಗಾಂವ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ವ್ಯಾಪಕವಾಗಿದೆ. ಪೊಲೀಸ್ ಅಧಿಕಾರಿಗಳೇ ಅಕ್ರಮ ವ್ಯವಹಾರಕ್ಕೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪವಿದೆ.

ಮಾದಕ ವಸ್ತು ವಶಕ್ಕೆ

ಡ್ರಗ್ಸ್​ ಅವ್ಯವಹಾರದ ವಿರುದ್ಧ ದಾಖಲಾದ ದೂರಿನ ಮೇರೆಗೆ ನರಸಿಂಗಪುರ ಪೊಲೀಸ್​ ವರಿಷ್ಠಾಧಿಕಾರಿ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಅನಿಲ್ ಅಜ್ಮೇರಿಯಾ, ಸಂಜಯ್ ಸೂರ್ಯವಂಶಿ ಹಾಗೂ ಕಾನ್ಸ್‌ಟೇಬಲ್ ನೀರಜ್ ಡೆಹ್ರಿಯಾ ಮತ್ತು ಇನ್ನೋರ್ವ ಅಧಿಕಾರಿಯನ್ನು ಒಳಗೊಂಡ ಗೂಂಡಾ ಸ್ಕ್ವಾಡ್‌ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಖಚಿತ ಮಾಹಿತಿ ಮೇರೆಗೆ ಈ ಸ್ಕ್ವಾಡ್, ಸೋನು ಕಹಾರ್ ಎಂಬ ಶಂಕಿತ ಮಾದಕವಸ್ತು ಕಳ್ಳಸಾಗಣೆದಾರನ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ 20 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.

ಠಾಣೆಯವರೆಗೂ ಎಳೆದೊಯ್ದರು

ತಮ್ಮ ಕಸ್ಟಡಿಯಲ್ಲಿದ್ದ ಸೋನು ಜೊತೆ ಪೊಲೀಸ್ ಠಾಣೆಗೆ ಪ್ರಯಾಣಿಸುವಾಗ ಆರೋಪಿಯ ತಾಯಿ ಮೋಹಿನಿ ಕಹಾರ್, ಸ್ಥಳಕ್ಕೆ ಆಗಮಿಸಿ ಮಗನ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಅವನ ಬಿಡುಗಡೆಗೆ ಒತ್ತಾಯಿಸಿ, ಕಾರಿನ ಬಾನೆಟ್ ಮೇಲೆ ಏರಿದಳು. ಈ ವೇಳೆ ಆಕೆಯನ್ನು ದೂರ ಸರಿಸುವ ಪ್ರಯತ್ನ ಮಾಡಿದಾದರೂ, ಪಟ್ಟು ಸಡಿಲಿಸಿದ ಮೋಹಿನಿ ಪ್ರತಿಭಟನೆಯನ್ನು ತೀವ್ರಗೊಳಿಸಿದಳು. ಈ ವೇಳೆ ಪೊಲೀಸರು ಆಕೆಯನ್ನು ಬಾನೆಟ್‌ನಲ್ಲಿ 500 ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಯವರೆಗೂ ಎಳೆದೊಯ್ದರು.

ಅಮಾನತು ಶಿಕ್ಷೆ

ಪೊಲೀಸರು ಠಾಣೆಗೆ ತಲುಪುವ ಮುನ್ನವೇ ದಾರಿಹೋಕರು ಮೊಬೈಲ್‌ನಲ್ಲಿ ಇಡೀ ಘಟನೆಯನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ, ನರಸಿಂಗಪುರದ ಪೊಲೀಸ್​ ವರಿಷ್ಠಾಧಿಕಾರಿ, ತನಿಖೆ ನಡೆಸುವಂತೆ ಡಿವೈಎಸ್​ಪಿ ಸೂಚಿಸಿದರು. ಬಳಿಕ ವರದಿ ಆಧರಿಸಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖೆ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. (ಏಜೆನ್ಸೀಸ್​)