ಸೊರಬ: ಎನ್‌ಡಿಎ ಮೈತ್ರಿಕೂಟದಲ್ಲಿ ಹಲವು ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿರುವುದರಿಂದ ನನಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿಲ್ಲ . ಈ ಬಗ್ಗೆ ಬೇಸರವಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಹಾಗೂ ಜನರ ಕೆಲಸ ಮಾಡುತ್ತೇನೆ. ಅಭಿವೃದ್ಧಿಗೆ ಯಾವುದೇ ಸಮಸ್ಯೆಯಾಗದಂತೆ ಅನುದಾನ ತರುವ ಶಕ್ತಿ ನನಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಠದಿಂದ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲೆಯ ಜನರು ಮತ್ತೊಮ್ಮೆ ಬೆಂಬಲಿಸಿರುವುದರಿಂದ ಸಹಜವಾಗಿ ಕೆಲಸ ಮಾಡುವ ಉತ್ಸಾಹ ಹೆಚ್ಚಾಗಿದೆ. ಜಡೆ ಹೋಬಳಿಯಲ್ಲಿ ಅತ್ಯಂತ ಹೆಚ್ಚು ಲೀಡ್ ಕೊಟ್ಟಿದ್ದಲ್ಲದೆ ತಾಲೂಕಿನಲ್ಲಿ ಹೆಚ್ಚಿನ ಅಂತರದಿಂದ ನನ್ನನ್ನು ಗೆಲ್ಲಿಸಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ದೆಹಲಿಯಿಂದ ನೇರವಾಗಿ ಹುಬ್ಬಳ್ಳಿಗೆ ಬಂದು ಗುರುಗಳ ಆಶೀರ್ವಾದ ಪಡೆದು ಜನರ ಸೇವೆ ಮಾಡುವ ಬಯಕೆ ನನ್ನದಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತ ಪರವಾದ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಬೆಳೆಗೆ ಬೆಂಬಲ ಬೆಲೆ ದೊರೆಯುವಂತೆ ನೋಡಿಕೊಳ್ಳಲಾಗುವುದು ಎನ್ನುವ ಭರವಸೆ ನೀಡಿದ್ದಾರೆ. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯರು, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಪ್ರಕಾಶ್, ಗ್ರಾಪಂ ಅಧ್ಯಕ್ಷ ಅಮಿತ್ ಗೌಡ, ರಾಜು ಗೌಡ, ಗುರುಪ್ರಸನ್ನ ಗೌಡ, ಪ್ರಮುಖರಾದ ಸುರೇಂದ್ರಗೌಡ, ಸುರೇಶ್, ರಾಘವೇಂದ್ರ, ಬಸವರಾಜ್, ವಿನಯ್‌ಕುಮಾರ, ನಾಗರಾಜ, ನಿರಂಜನ್, ವಿಜಯೇಂದ್ರ ಕುಮಾರ್, ಗೀತಾ ಮಲ್ಲಿಕಾರ್ಜುನ, ಅಶೋಕ್, ದಯಾನಂದ ಗೌಡ, ಮಲ್ಲಿಕಾರ್ಜುನ ಇತರರಿದ್ದರು.