ದಾವೋಸ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ದಸ್ಸಾಲ್ಟ್ ಸಿಸ್ಟಮ್ಸ್​ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಫ್ಲಾರೆನ್ಸ್ ವರ್ಜೆಲೆನ್ ಮಾತುಕತೆ ನಡೆಸಿದರು. ಸಚಿವ ಮುರುಗೇಶ್ ನಿರಾಣಿ ಇದ್ದರು. 
ನ್ಯೂಸ್

ಲುಲು ಗ್ರೂಪ್​ನೊಂದಿಗೆ 2000 ಕೋಟಿ ರೂ. ಒಪ್ಪಂದ; ಒಪ್ಪಂದಕ್ಕೆ ದಾವೋಸ್​ನಲ್ಲಿ ಬೊಮ್ಮಾಯಿ ಅಂಕಿತ

ಬೆಂಗಳೂರು: ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ಆಯೋಜನೆಗೊಂಡಿರುವ ವಿಶ್ವ ಆರ್ಥಿಕ ಶೃಂಗದ ವಾರ್ಷಿಕ ಸಮಾವೇಶದ ಮೊದಲ ದಿನವೇ ಕರ್ನಾಟಕ ಭರ್ಜರಿ ಆರಂಭ ಕಂಡಿದೆ. ಲುಲು ಸಮೂಹವು ರಾಜ್ಯದಲ್ಲಿ 2,000 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಕ್ಷಮ ಲುಲು ಗ್ರೂಪ್ ಇಂಟರ್​ನ್ಯಾಷನಲ್ ನಿರ್ದೇಶಕ ಎ.ವಿ.ಅನಂತರಾಮನ್ ಅವರೊಂದಿಗೆ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ರಾಜ್ಯದಲ್ಲಿ ನಾಲ್ಕು ಶಾಪಿಂಗ್ ಮಾಲ್, ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆ ಸ್ಥಾಪಿಸಲು ಲುಲು ಗ್ರೂಪ್ ಉದ್ದೇಶಿಸಿದ್ದು, 10,000ಕ್ಕೂ ಹೆಚ್ಚು ಉದ್ಯೋಗ ಸೃಜನೆಯಾಗುವ ನಿರೀಕ್ಷೆಯಿದೆ.

ಆಫರ್​ಗೆ ಉತ್ಸುಕತೆ

1. ಜ್ಯೂಬಿಲಿಯಂಟ್ ಗ್ರೂಪ್: ಕರ್ನಾಟಕದಲ್ಲಿ ಫಾರ್ವ, ಎಫ್.ಎಂ.ಸಿ.ಜಿ ವಲಯದಲ್ಲಿ ಹೂಡಿಕೆ ಅವಕಾಶಗಳ ಅನ್ವೇಷಣೆ, ಧಾರವಾಡದಲ್ಲಿ ಎಫ್.ಎಂ.ಸಿ.ಜಿ ವಲಯದಲ್ಲಿ ಹೂಡಿಕೆಗೆ ಪ್ಯಾಕೇಜ್ ಪರಿಗಣಿಸಲು ಬೊಮ್ಮಾಯಿ ಸಲಹೆ ನೀಡಿದ್ದಾರೆ. ಜ್ಯೂಬಿಲಿಯಂಟ್ ಫುಡ್ ವರ್ಕ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ದೇವನಹಳ್ಳಿಯ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ತೀರ್ವನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9000 ಜನರು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

2. ಹಿಟಾಚಿ ಎನರ್ಜಿ: ಸಂಸ್ಥೆಯ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆಯ ಸಂದರ್ಭದಲ್ಲಿ ಇ-ವಿ ಚಾರ್ಜಿಂಗ್​ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆಗೆ ಯೋಜಿಸುತ್ತಿರುವುದಾಗಿ ತಿಳಿಸಿದೆ. ಬೆಂಗಳೂರಿನಲ್ಲಿ ಪ್ರತಿಭೆಯ ಲಭ್ಯತೆ ಇರುವುದರಿಂದ ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ. ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಸಂಸ್ಥೆಯು ದೊಡ್ಡಬಳ್ಳಾಪುರದಲ್ಲಿ ಇಂಧನ ಗುಣಮಟ್ಟ ಉಪಕರಣ ಘಟಕಕ್ಕೆ ಚಾಲನೆ ನೀಡಲಿದೆ. 2,000 ಇಂಜಿನಿಯರ್​ಗಳನ್ನು ಹೊಂದಿರುವ ಇಂಜಿನಿಯರ್ ಕೇಂದ್ರ ನಿರ್ವಿುಸುತ್ತಿದೆ.

3. ಸೀಮೆನ್ಸ್: ಬೆಂಗಳೂರಿನಲ್ಲಿ ಎರಡು ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಗ್ನಸ್ಟಿಕ್ಸ್ ಕೇಂದ್ರೀಕೃತವಾದ ಆರ್ ಅಂಡ್ ಡಿ ಆರೋಗ್ಯ ಯೋಜನೆಯಿದು. ಸ್ಥಳೀಯ ಮಾರುಕಟ್ಟೆಗಳಿಗೆ ಮಾರಾಟ ಮಾಡಲು ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಘಟಕವನ್ನು ಬೊಮ್ಮಸಂದ್ರದಲ್ಲಿ ಸ್ಥಾಪಿಸಲಿದ್ದು, 2022ರ ಸೆಪ್ಟೆಂಬರ್​ನಲ್ಲಿ ಏರ್ಪಡಿಸಲು ಉದ್ದೇಶಿತ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬೊಮ್ಮಾಯಿಗೆ ಸಂಸ್ಥೆ ಆಹ್ವಾನಿಸಿತು. ಈ ಸಂಸ್ಥೆ ಬೆಂಗಳೂರಿನಲ್ಲಿ 2500 ಇಂಜಿನಿಯರ್​ಗಳನ್ನು ಹೊಂದಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪೋ›ತ್ಸಾಹಕಗಳನ್ನು ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ಬೆಂಗಳೂರಿನಾಚೆ ಯೋಜನೆಯಡಿ ತುಮಕೂರು, ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ನಡುವೆ ಚರ್ಚೆಯಾಯಿತು.

ನಿರೀಕ್ಷೆ ಫಲಪ್ರದ?: ಜಾಗತಿಕ ಉದ್ಯಮಿಗಳು, ಕಂಪನಿಗಳು, ಹೂಡಿಕೆದಾರರಿಗೆ ಕರ್ನಾಟಕ ಅದರಲ್ಲೂ ಬೆಂಗಳೂರು ಬಗ್ಗೆ ಒಲವು ಜಾಸ್ತಿ. ಈ ಬಾರಿಯೂ ದಾವೋಸ್​ನಲ್ಲಿ ರಾಜ್ಯ ಗಮನಸೆಳೆಯಲಿದೆ ಎಂಬ ನಿರೀಕ್ಷೆ ಫಲಪ್ರದವಾಗುವ ಲಕ್ಷಣ ಗೋಚರಿಸಿದೆ. ಶೃಂಗದಲ್ಲಿ ಕರ್ನಾಟಕ ಪೆವಿಲಿಯನ್​ಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ಗೋಷ್ಠಿಗೂ ಮುನ್ನ ವಿವಿಧ ಕಂಪನಿಗಳ ಜತೆಗೆ ಮಹತ್ವದ ಮಾತುಕತೆ ನಡೆಸಿದರು. ಮಣ್ಣು ಸಂರಕ್ಷಣೆಗಾಗಿ ದ್ವಿಚಕ್ರ ವಾಹನದ ಮೇಲೆ ಜಾಗೃತಿ ಅಭಿಯಾನ ಕೈಗೆತ್ತಿಕೊಂಡಿರುವ ಈಶ ಫೌಂಡೇಷನ್ ಮುಖ್ಯಸ್ಥ ಸದ್ಗುರು ಅವರು ಇದೇ ಸಂದರ್ಭದಲ್ಲಿ ಬೊಮ್ಮಾಯಿ ಮತ್ತವರ ತಂಡವನ್ನು ಭೇಟಿಯಾಗಿ ರ್ಚಚಿಸಿದರು.

ಯಾರ್ಯಾರ ಜತೆ ಮಾತುಕತೆ?: ಹೀರೋ ಮೋಟೋಕಾರ್ಪ್ ಅಧ್ಯಕ್ಷ ಹಾಗೂ ಸಿಇಒ ಪವನ್ ಮುಂಜಲ್, ಎಬಿಇನ್ ಬೇವ್ ಸಂಸ್ಥೆಯ ನಿಯಂತ್ರಣ ಹಾಗೂ ಸಾರ್ವಜನಿಕ ನೀತಿ ಜಾಗತಿಕ ಉಪಾಧ್ಯಕ್ಷ ಅಂಡ್ರೆಸ್ ಪೆನಾತೆ, ನೆಸ್ಲೆ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷ ಮಗ್ದಿ ಬತಾಟೋ, ದಸ್ಸಾಲ್ಟ್ ಸಿಸ್ಟಮ್ಸ್​ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಫ್ಲಾರೆನ್ಸ್ ವರ್ಜೆಲೆನ್, ಅರ್ಸೆಲರ್ ಮಿತ್ತಲ್ ಕಂಪನಿಯ ಲಕ್ಷ್ಮಿ ಮಿತ್ತಲ್ ಜತೆಗೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿ, ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಉದ್ಯಮ ಸ್ಥಾಪನೆಗೆ ನೀಡುತ್ತಿರುವ ವಿಶೇಷ ಸವಲತ್ತುಗಳು ಹಾಗೂ ರಿಯಾಯಿತಿಗಳ ಬಗ್ಗೆ ವಿವರಿಸಿದರು.