ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಗುರುವಾರ ಆದೇಶ ಹೊರಡಿಸಿದೆ. ಬಹುತೇಕ ವಾಹನ ಸವಾರರು ಈ ಆದೇಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಬಾಕಿ ಇರಿಸಿಕೊಂಡಿದ್ದ ದಂಡವನ್ನು ಕಟ್ಟುತ್ತಿದ್ದಾರೆ.
ಇದೀಗ ಎರಡನೇ ದಿನದಲ್ಲಿ ಬರೋಬ್ಬರಿ 6,80,72,500 ರೂಪಾಯಿ ದಂಡ ಸಂಗ್ರಹವಾಗಿದೆ. ಇಂದು 520 ಪ್ರಕರಣಗಳಲ್ಲಿ 2 ಲಕ್ಷ 52 ಸಾವಿರ ರೂ ಸಂಗ್ರಹವಾಗಿದೆ. PDA ಮೂಲಕ 2,72,45,400 ರೂಪಾಯಿ ಹಾಗೂ ಪೇಟಿಎಂ ಮೂಲಕ 3,27,81,350 ರೂ. ದಂಡದ ಮೊತ್ತ ಸಂಗ್ರಹವಾಗಿದೆ. ಬೆಂಗಳೂರು ಓನ್ -78,58,950 ರೂ, TMC ಕೇಂದ್ರ -18,6,800 ರೂ. ದಂಡ ಸಂಗ್ರಹವಾಗಿದೆ.
ಸದ್ಯ 2 ದಿನಗಳಿಂದ 13,81,13,621 ರೂಪಾಯಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಪಾವತಿಯಾಗಿದೆ. ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ. ನಿಗದಿತ ದಿನಾಂಕದಂದು ಬಾಕಿ ಪ್ರಕರಣಗಳನ್ನು ಇತ್ಯಾರ್ಥ ಮಾಡಿಕೊಳ್ಳುವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಆನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ವಿನಾಯಿತಿ ನೀಡಿದ್ದೇಕೆ?
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಎಲ್ಲರಿಗೂ ನ್ಯಾಯ ಒದಗಿಸುವ ಸಲುವಾಗಿ ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಗ್ರೀನ್ ಸಿಗ್ನಲ್ ತೋರಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.