Youtuber Arrest: ತನ್ನ ಯೂಟ್ಯೂಬ್ ಚಾನೆಲ್‌ಗೆ ಸಬ್ಸ್ಕ್ರೈಬ್ ಆದ ಜನರಿಗೆ, ಸದಾ ಪ್ರಾಮಾಣಿಕತೆ ಮತ್ತು ಅಪರಾಧ ಮುಕ್ತ ಜೀವನವನ್ನು ನಡೆಸುವುದು ಹೇಗೆ, ಕ್ರಿಮಿನಲ್ ಚಟುವಟಿಕೆಗಳಿಂದ ದೂರವಿರುವುದು ಹೇಗೆ? ಎಂದು ಮೋಟಿವೇಷನಲ್ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದ ಯುಟ್ಯೂಬರ್ ಇದೀಗ ತನ್ನ ಮಾತಿಗೆ ತಾನೇ ವಿರುದ್ಧವಾಗಿ ನಡೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಟೀ/ಕಾಫಿ ಕುಡಿಯುವುದರಿಂದ ಏನೆಲ್ಲ ಸಮಸ್ಯೆ? ಇಲ್ಲಿದೆ ತಿಳಿಯಿರಿ ಉಪಯುಕ್ತ ಮಾಹಿತಿ | Tea/Coffee
ಕಳ್ಳತನದ ಆರೋಪದಡಿ ಸಿಕ್ಕಿಬಿದ್ದಿರುವ ಯೂಟ್ಯೂಬರ್ ಅನ್ನು ಒಡಿಶಾ ರಾಜ್ಯದ ಭುವನೇಶ್ವರ ಮೂಲದ ಮನೋಜ್ ಸಿಂಗ್ ಎಂದು ಗುರುತಿಸಲಾಗಿದೆ. 'ಚೇಂಜ್ ಯುವರ್ ಲೈಫ್' ಎಂಬ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದ ಮನೋಜ್, ಸದ್ಯ ಕಳ್ಳತನ ಕೇಸ್ನಲ್ಲಿ ಅರೆಸ್ಟ್ ಆಗಿದ್ದಾನೆ. ವರದಿಗಳ ಪ್ರಕಾರ, ಈತನ ವಿರುದ್ಧ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿನ್ನಾಭರಣಗಳು ಮತ್ತು ಹಣವನ್ನು ಕದ್ದ ಪ್ರಕರಣದಲ್ಲಿ ಮನೋಜ್ ಸಿಂಗ್ ಸಿಕ್ಕಿಬಿದ್ದಿರುವುದಾಗಿ ಖಾಕಿ ಪಡೆ ತಿಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ಬೆಳಗ್ಗೆ ಸಮಯದಲ್ಲಿ ಬೀಗ ಹಾಕಿರುವ ಪ್ರತ್ಯೇಕ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು, ಕಳ್ಳತನದ ಕೆಲಸದಲ್ಲಿ ತೊಡಗುತ್ತಿದ್ದ. ಅತ್ತ ತನ್ನ ಯುಟ್ಯೂಬ್ ವೀಕ್ಷಕರನ್ನು, ಶಿಸ್ತುಬದ್ಧ ಜೀವನ ಮತ್ತು ಸಮಗ್ರ ಬದುಕು ನಡೆಸುವಂತೆ ಪ್ರೇರಣೆ ನೀಡುತ್ತಿದ್ದ ಮನೋಜ್, ನಾವು ಕ್ರೈಂ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಹಾಗೇನಾದರೂ ಮಾಡಿದ್ದಲ್ಲಿ, ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ ಎನ್ನುತ್ತಿದ್ದ. ಆದರೆ, ನಿಜ ಜೀವನದಲ್ಲಿ ತನ್ನ ಮಾತಿಗೆ ತಾನೇ ವಿರುದ್ಧವಾಗಿ ನಡೆದುಕೊಂಡಿದ್ದು, ಅದೇ ಕ್ರಿಮಿನಲ್ ಕೆಲಸಗಳಲ್ಲಿ ತೊಡಗಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಸದ್ಯ ಬಂಧನವಾಗಿರುವ ಮನೋಜ್ ಸಿಂಗ್ನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆತನ ವಿರುದ್ಧ ಇನ್ಯಾವುದಾದರೂ ಪ್ರಕರಣಗಳು ಇವೆಯೇ? ಎಂದು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ನಿವಾಸಿಗಳು ಜಾಗರೂಕರಾಗಿರಬೇಕು ಮತ್ತು ಆನ್ಲೈನ್ನಲ್ಲಿ ಕಾಣಿಸಿಕೊಳ್ಳುವ ಅಥವಾ ಬಣ್ಣ ಬಣ್ಣದ ಮಾತುಗಳನ್ನಾಡುವ ವ್ಯಕ್ತಿಗಳನ್ನು ನಂಬಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).