ಬೆಂಗಳೂರು: ( Bengaluru ) ಸಾಲು, ಸಾಲು ದುರಂತ ಕಣ್ಣ ಮುಂದೆ ಇರುವಾಗಲೇ ಬೆಂಗಳೂರಲ್ಲಿ ಬಾಣಂತಿಯೊಬ್ಬರ ಸಾವಾಗಿದೆ . ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊನೆಗೂ ಜೀವ ಬಿಟ್ಟಿದ್ದಾರೆ.
ಬಳ್ಳಾರಿ, ರಾಯಚೂರು, ಬೆಳಗಾವಿಯ ಬಳಿಕ ಇದೀಗ ಬೆಂಗಳೂರಿನಲ್ಲಿಯೂ ಬಾಣಂತಿಯೊಬ್ಬರ ಸಾವಾಗಿದೆ. ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಅನುಷಾ ಮೃತಪಟ್ಟಿದ್ದಾರೆ.
ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ, ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಸಿಟಿ ಸ್ಕ್ಯಾನಿಂಗ್, ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಗುರುವಾರ ಲಿವರ್ ಪ್ರಾಬ್ಲಂ ಎಂದ ವೈದ್ಯರು ಶುಕ್ರವಾರ ಅನುಷಾಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಆದ ಮೇಲೆ ಅನುಷಾ ಯಾರ ಜೊತೆನೂ ಮಾತನಾಡಿಲ್ಲ. ಇದಾದ ಮೇಲೆ ವೈದ್ಯರು ಹಾರ್ಟ್ ಪ್ರಾಬ್ಲಂ ಆಗಿದೆ ಎಂದಿದ್ದಾರೆ. ಕೊನೆಗೆ ಇಂದು ಬೆಳಗಿನ ಜಾವ 4 ಗಂಟೆಗೆ ಅನುಷಾ ಮೃತಪಟ್ಟಿದ್ದಾರೆ. ನಾಲ್ಕು ದಿನಗಳಿಂದ ನಾಲ್ಕುವರೆ ಲಕ್ಷ ಬಿಲ್ ಮಾಡಿರೋ ಆಸ್ಪತ್ರೆ ಸಿಬ್ಬಂದಿ, ನಾಲ್ಕು ಲಕ್ಷ ಹಣ ಕೊಟ್ರೆ ಮೃತದೇಹ ಕೊಡ್ತೀವಿ ಎಂದು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.