ಗಾಜಿಯಾಬಾದ್: ತಾಯಿ ಬೈದಳೆಂದು ಅಪ್ರಾಪ್ತ ವಯಸ್ಸಿನ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಸಾನಿಯಾ ಎಂದು ಗುರುತಿಸಲಾಗಿದ್ದು, 5 ನೇ ತರತಿಯಲ್ಲಿ ಓದುತ್ತಿದ್ದಳು. ಹುಸೇನಪುರ ಗ್ರಾಮದ ನಿವಾಸಿಯಾಗಿರುವ ನಫೀಸ್ ತನ್ನ ಪತ್ನಿ ಶಬಾನಾ, ಮಕ್ಕಳಾದ ಸಮದ್, ಸಮರ್ ಮತ್ತು ಮಗಳು ಸಾನಿಯಾಳೊಂದಿಗೆ ವಾಸಿಸುತ್ತಿದ್ದಾರೆ.
ಕಳೆದ ಗುರುವಾರ ರಾತ್ರಿ ತಾಯಿ ಶಬಾನಾ ಅಡುಗೆ ಮಾಡುತ್ತಿದ್ದು, ಸಾನಿಯಾ ಮೊಬೈಲ್ ನೋಡುತ್ತಿದ್ದಳು. ಈ ವೇಳೆ ತಾಯಿಯು ತಾನು ಅಡುಗೆ ಮಾಡುತ್ತಿದ್ದು ಊಟ ಸಹೋದರರನ್ನ ಕರೆದುಕೊಂಡು ಊಟ ಮಾಡುವಂತೆ ಹೇಳಿದ್ದಾಳೆ. ಆದರೆ ಸಾನಿಯಾ ಮೊಬೈಲ್ ನೋಡುತ್ತಲೇ ಇದ್ದಳು. ಆಗ ತಾಯಿಯು ಸಾನಿಯಾಳ ಮೊಬೈಲ್ ಕಸಿದುಕೊಂಡು ಆಕೆಯನ್ನು ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಕೊಠಡಿಗೆ ತೆರಳಿದ್ದು, ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಗೆ ಬಂದಿರಲಿಲ್ಲ.
ಕೊನೆಗೆ ಕೊಠಡಿಯ ಬಾಗಿಲು ಒಡೆದು ನೋಡಿದಾಗ ಸಾನಿಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಕೆಳಗಿಳಿಸಿ ಸ್ಥಳೀಯ ವೈದ್ಯರ ಬಳಿ ಕರೆದೊಯ್ದಿದ್ದು ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗ ಘೋಷಿಸಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್)