ನ್ಯೂಸ್

ಮೂವರು ಅಪ್ರಾಪ್ತ ಮಕ್ಕಳನ್ನು ನೀರಿನ ಟ್ಯಾಂಕ್​ಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ| Suicide

ಬಲೋತ್ರಾ: ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ಗುರುವಾರ(ಅ. 23) ಮಹಿಳೆಯೊಬ್ಬರು ತನ್ನ ಮೂವರು ಅಪ್ರಾಪ್ತ ಮಕ್ಕಳನ್ನು ನೀರಿನ ಟ್ಯಾಂಕ್​​ಗೆ ತಳ್ಳಿ, ಬಳಿಕ ಅದೇ ಟ್ಯಾಂಕ್​ಗೆ ತಾನೂ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಜಾಸೋಲ್ ಪ್ರದೇಶದ ತಪ್ರಾ ಗ್ರಾಮದ ಬಳಿಯ ಜಮೀನಿನಲ್ಲಿರುವ ನೀರಿನ ಟ್ಯಾಂಕ್‌ನಿಂದ ಮಹಿಳೆ ಮತ್ತು ಮೂವರು ಮಕ್ಕಳ ಶವಗಳನ್ನು ಬೆಳಿಗ್ಗೆ ಹೊರತೆಗೆಯಲಾಗಿದೆ. ತಾಯಿ ಮಮತಾ (32) ಮಕ್ಕಳಾದ ನವೀನ್(7) ಮತ್ತು ರುಗರಾಮ್(4) ಹಾಗೂ 6 ತಿಂಗಳ ಕೂಸು ಮಗಳು ಮಾನ್ವಿ ಮೃತಪಟ್ಟವರು.

ಈ ಕುರಿತು ಮಾತನಾಡಿರುವ ಸಿವಾನ ಡಿಎಸ್​ಪಿ ನೀರಜ್ ಶರ್ಮಾ, ಕಳೆದ ಹತ್ತು ದಿನಗಳಿಂದ ಕೊಯ್ಲಿಗೆಂದು ಮೃತರ ಕುಟುಂಬದವರು ತಮ್ಮ ಜಮೀನಿನಲ್ಲಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಊಟದ ಬಳಿಕ ಎಲ್ಲಾ ಸದಸ್ಯರು ಮಲಗಿದ್ದರು. ಬಳಿಕ ಮಮತಾ ತನ್ನ ಮೂವರು ಮಕ್ಕಳನ್ನು ಕರೆದೊಯ್ದು ನೀರಿನ ಟ್ಯಾಂಕ್‌ಗೆ ಹಾರಿದ್ದಾರೆ ಎಂದು ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ ಮಮತಾಳ ಅತ್ತೆ ಮನೆಯಿಂದ ಮೂವರು ಮಕ್ಕಳು, ಆಕೆ ಕಾಣೆಯಾಗಿರುವುದನ್ನು ಕಂಡು ಹುಡುಕಲು ಪ್ರಾರಂಭಿಸಿದ್ದಾರೆ. ಟ್ಯಾಂಕ್​ನ ಅಂಚಿನ ಬಳಿ ಮಮತಾಳ ಚಪ್ಪಲಿಗಳು ಇದ್ದುದನ್ನು ಗಮನಿಸಿದಾಗ, ಟ್ಯಾಂಕ್​ನ ಒಳ ನೋಡಿದಾಗ ನೀರಿನಲ್ಲಿ ತೇಲುತ್ತಿರುವ ಶವಗಳನ್ನು ಕಂಡಿವೆ. ಮಹಿಳೆ ತಕ್ಷಣ ಗ್ರಾಮಸ್ಥರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಜಾಸೋಲ್ ಪೊಲೀಸ್ ಠಾಣೆ ಮತ್ತು ನಾಗರಿಕ ರಕ್ಷಣಾ ಘಟಕದ ತಂಡವು ಸ್ಥಳೀಯರ ಸಹಾಯದಿಂದ ನಾಲ್ಕು ಶವಗಳನ್ನು ಟ್ಯಾಂಕ್‌ನಿಂದ ಹೊರತೆಗೆದರು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕವಾಗಿ ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದು, ಘಟನೆಗೆ ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ. ಮಮತಾ ಅವರ ಪತಿ ಅಂಡಾರಾಮ್ ಪಟೇಲ್ ಬೆಂಗಳೂರಿನಲ್ಲಿ ಸುಮಾರು ಐದು ತಿಂಗಳ ಹಿಂದೆ ಆರಂಭಿಸಿದ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್​)