ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್ ಸಮೀಪದ ಹೋಪ್ ಫಾರ್ಮ್ ಬಳಿ ಕಳೆದ ವರ್ಷ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಮೂವರು ಬೆಸ್ಕಾಂ ಇಂಜಿನಿಯರ್‌ಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ, ಅಲ್ಲದೆ, ಮೂವರು ಸಹ ತನಿಖೆ ಎದುರಿಸಲೇಬೇಕು ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣ ಸಂಬಂಧ ಮೊದಲನೇ ಆರೋಪಿಯಾದ ಬೆಸ್ಕಾಂ ಕಾರ್ಯಕಾರಿ ಇಂಜಿನಿಯರ್ ವಿ.ಶ್ರೀರಾಮು, ಎರಡು ಮತ್ತು ಮೂರನೇ ಆರೋಪಿ ಮತ್ತು ಸಹಾಯಕ ಇಂಜಿನಿಯರ್‌ಗಳಾದ ಎಸ್.ಚೇತನ್ ಮತ್ತು ಟಿ.ಸುಬ್ರಮಣ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಅಲ್ಲದೆ, ‘‘ಬೆಸ್ಕಾಂನ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ವರದಿ ನೀಡಿದ್ದಾರೆ. ಅದರಂತೆ ಯಾರೊಬ್ಬರನ್ನೂ ನೇರ ಹೊಣೆಗಾರರನ್ನಾಗಿ ಮಾಡಲಾಗದು ಎಂದು ಹೇಳಲಾಗದು. ತನಿಖೆಯನ್ನು ಮುಂದುವರಿಸಲು ಅವಕಾಶ ನೀಡಬಹುದು. ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳಲ್ಲಿ ನಿರ್ಲಕ್ಷ್ಯವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಆದೇಶಿಸಿದೆ.
ಈ ಪ್ರಕರಣದಲ್ಲಿ ದೂರುದಾರರ ಪತ್ನಿ ಹಾಗೂ ಮಗು ಮೃತಪಟ್ಟಿದೆ. ಆದ್ದರಿಂದ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಹೇಳಬಹುದು, ಆ ನಿರ್ಲಕ್ಷ್ಯಕ್ಕೆ ಯಾರು ಕಾರಣರು ಎಂಬುದು ತನಿಖೆ ಅಥವಾ ವಿಚಾರಣೆ ವೇಳೆಯೇ ನಿರ್ಧಾರವಾಗಬೇಕಿದೆ. ಹಾಗಾಗಿ ಈ ಹಂತದಲ್ಲಿಯೇ ಪ್ರಕರಣ ರದ್ದು ಮಾಡಲಾಗದು’ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಪ್ರಕರಣವನ್ನು ದಾಖಲಿಸಲಾಗಿದ್ದು, ಅವರು ತನಿಖೆಯನ್ನು ಎದುರಿಸಲೇಬೇಕು ಎಂದು ಆದೇಶಿಸಿದೆ.