ಲಂಡನ್: ಗ್ಯಾಸ್ ಸ್ಪೋಟಗೊಂಡ ಪರಿಣಾಮ ಇಡೀ ಮನೆಯ ಕುಸಿದುಬಿದ್ದರೂ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಮನೆಯಲ್ಲಿದ್ದ ಫ್ರಿಡ್ಜ್ನ ಫ್ರೀಜರ್ನಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಜಸ್ಸಿಕಾ ವಿಲಿಯಮ್ಸ್ (31) ಆಕೆಯ ಮಕ್ಕಳಾದ ರೂಬೆನ್ (5) ಮತ್ತು ಎಲಿಯಟ್ (2) ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಗ್ಲೆಂಡ್ನ ಸೌಥ್ ವೇಲ್ಸ್ನಲ್ಲಿರುವ ಮೂರು ಬೆಡ್ರೂಮಿನ ಅವರ ನಿವಾಸವು ಬುಧವಾರ ಮಧ್ಯಾಹ್ನ 2:05ರಲ್ಲಿ ಸಂಭವಿಸಿದ ಗ್ಯಾಸ್ ಸ್ಪೋಟದಿಂದ ಸಂಪೂರ್ಣ ನಾಶವಾಗಿದೆ. ಈ ವೇಳೆ ಅವಶೇಷಗಳ ಅಡಿಯಲ್ಲಿ ಸಿಲುಕ್ಕಿದ್ದ ತಾಯಿ ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ.
ತಾಯಿ ಮತ್ತು ಮಕ್ಕಳ ಸ್ಥಿತಿ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದು, ಆರೋಗ್ಯ ಸ್ಥಿರವಾಗಿದೆ. ನರ್ಸರಿ ಉದ್ಯೋಗಿಯಾಗಿರುವ ಜಸ್ಸಿಕಾರನ್ನು ಮಾಜಿ ಅಗ್ನಿಶಾಮಕ ಸಿಬ್ಬಂದಿ ಜೆಫ್ ಡೆವಿಸ್ ಎಂಬಾತ ಬಹುದೊಡ್ಡ ಫ್ರಿಡ್ಜ್ ಫ್ರೀಜರ್ ಅಡಿಯಲ್ಲಿ ಸಿಲುಕಿದ್ದನ್ನು ಗಮನಿಸಿ ರಕ್ಷಿಸಿದ್ದಾರೆ. ಫ್ರೀಜರ್ನಿಂದ ಅವರ ಪ್ರಾಣಕ್ಕೆ ಹೆಚ್ಚಿನ ತೊಂದರೆಯಾಗಿಲ್ಲ. ಮಕ್ಕಳ ರಕ್ಷಣೆಗಾಗಿ ಜಸ್ಸಿಕಾ ಫ್ರೀಜರ್ ಬಳಿ ಹೋದರು ಎಂದು ತಿಳಿದುಬಂದಿದ್ದು, ಆಕೆಯ ಧೈರ್ಯವನ್ನು ಮೆಚ್ಚಬೇಕೆಂದು ಡೆವಿಸ್ ಹೇಳಿದ್ದಾರೆ.
ಜಸ್ಸಿಕಾರನ್ನು ನೋಡಿ ಜೋರಾಗಿ ಮತ್ತೊಬ್ಬರ ಸಹಾಯಕ್ಕಾಗಿ ಡೆವಿಸ್ ಕೂಗಿಕೊಂಡಿದ್ದಾರೆ. ಈ ವೇಳೆ ಓಡಿ ಬಂದ ಸ್ಥಳೀಯರ ಸಹಾಯದಿಂದ ಜಸ್ಸಿಕಾ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಸ್ಸಿಕಾ ಪತಿ ಮೈಕ್ ಡೇವಿಡ್ ಕೆಲಸದ ನಿಮಿತ್ತ ಕಚೇರಿಯಲ್ಲಿದ್ದರಿಂದ ಬಚಾವ್ ಆಗಿದ್ದಾರೆ. ಆದರೆ, ಪತ್ನಿ ಮತ್ತು ಮಕ್ಕಳು ಸ್ಪೋಟಕ್ಕೆ ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ಆಘಾತದಿಂದ ಆಸ್ಪತ್ರೆಗೆ ಓಡಿ ಬಂದು ಪತ್ನಿ ಮತ್ತು ಮಕ್ಕಳ ಕಾಳಜಿ ವಹಿಸುತ್ತಿದ್ದಾರೆ.
ಸ್ಪೋಟದ ರಭಸಕ್ಕೆ 3 ಬೆಡ್ ರೂಮಿನ ಮನೆ ಸಂಪೂರ್ಣ ಕುಸಿದುಬಿದ್ದಿದ್ದರೂ ಅವರು ಬದುಕುಳಿರುವುದು ಅಚ್ಚರಿಯೇ ಸರಿ. ಅಗ್ನಿಶಾಮಕ ಸಿಬ್ಬಂದಿ ಮನೆಯ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಸ್ಪೋಟದ ಪರಿಣಾಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)