ನ್ಯೂಸ್

ಕರಗಿದ ರಾಜ್ಯ ಸರ್ಕಾರದ ಬಹುತೇಕ ತಕರಾರು

ಬೆಂಗಳೂರು: ಶಾಸನ ಸಭೆಯಿಂದ ಅಂಗೀಕಾರಗೊಂಡು ರಾಜ್ಯಪಾಲರ ಅಂಕಿತಕ್ಕೆ ಕಾಯ್ದಿದ್ದ ವಿಧೇಯಕಗಳಿಗೆ ಕೊನೆಗೂ ಮುಕ್ತಿಸಿಕ್ಕಿದೆ. ಮೂರು ವಿಧೇಯಕಗಳಿಗೆ ರಾಜ್ಯಪಾಲು ಸೋಮವಾರ ಅಂಕಿತ ಹಾಕಿ ಕಳಿಸಿದ್ದು, ಇಂದು ನಾಳೆಯೊಳಗೆ ಅಧಿಕೃತ ರಾಜ್ಯಪತ್ರ ಪ್ರಕಟವಾಗಲಿದೆ.
ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ 2023, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024, ಕರ್ನಾಟಕ ಮುನಿಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2024ಕ್ಕೆ ರಾಜ್ಯಪಾಲರ ಮುದ್ರೆ ಬಿದ್ದಿದೆ.
ಕರ್ನಾಟಕ ಸಾರ್ವಜನಿಕ ಪರೀಕ್ಷೆ ವಿಧೇಯಕ 2023ರ ಡಿಸೆಂಬರ್ 6ರಂದು ವಿಧಾನಸಭೆಯಲ್ಲಿ ಮಂಡನೆಯಾಗಿ, ಡಿ.13ರಂದು ಅಂಗೀಕಾರಗೊಂಡಿತ್ತು. ಬಳಿಕ ಡಿ.14ರಂದು ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾಗಿ ರಾಜ್ಯಪಾಲರ ಸಹಿಗೆ ಕಳಿಸಿಕೊಡಲಾಗಿತ್ತು.
ವಿಧೇಯಕ ಕರಡು ತಯಾರಿ ಸಂದರ್ಭದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಮುಖ್ಯಮಂತ್ರಿಯವರ ಅಭಿಪ್ರಾಯ, ಕಾನೂನು ಇಲಾಖೆ ಪ್ರಸ್ತಾಪ ಯಾವುದನ್ನೂ ಗಮನಿಸಿದೇ ಗೃಹ ಇಲಾಖೆ ತರಾತುರಿಯಲ್ಲಿ ವಿಧೇಯಕ ಮಂಡಿಸಿದ್ದನ್ನು ರಾಜ್ಯಪಾಲರು ಗಮನಿಸಿ ಸ್ಪಷ್ಟನೆ ಕೇಳಿದ್ದರು.
ಈ ವಿಧೇಯಕದ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿರುವುದರಿಂದ ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಿಗಳು, ಮಂಡಳಿಗಳು ಅಥವಾ ನಿಗಮಗಳ ಅಭಿಪ್ರಾಯ ಪಡೆಯಬೇಕಾಗುತ್ತದೆ ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿತ್ತು. ಆದರೆ ಅಭಿಪ್ರಾಯ ಪಡೆದಿರಲಿಲ್ಲ ಎಂಬ ಅಂಶವನ್ನು ರಾಜಭವನ ಕಂಡುಕೊಂಡಿತ್ತು.
ರಾಜ್ಯ ಸರ್ಕಾರದಲ್ಲಿ ಅಥವಾ ಅದರಡಿಯಲ್ಲಿನ ಯಾವುದೇ ಹುದ್ದೆಗೆ ನೇಮಕಾತಿ ಉದ್ದೇಶಕ್ಕಾಗಿ ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುಚಿತ ಹಾಗೂ ಭ್ರಷ್ಟಾಚಾರದ ವಿಧಾನ ಬಳಕೆಯನ್ನು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ, ಪರಿಣಾಮಕಾರಿ ಕ್ರಮಕೈಗೊಳ್ಳಲು ಈ ವಿಧೇಯಕ ಅಸವಾಗಿ ಬಳಕೆಯಾಗುವುದರಿಂದ ಇದು ಮಹತ್ವವಾಗಿದ್ದು, ಪೂರ್ವ ತಯಾರಿ ನಡೆದಿಲ್ಲ ಎಂಬುದನ್ನು ಗುರುತಿಸಲಾಗಿತ್ತು.
ಒಟ್ಟಾರೆ 11 ವಿಧೇಯಕಗಳಿಗೆ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ, ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆಂದು ಆಡಳಿತಾರೂಢ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಇದೊಂದು ರಾಜಕೀಯ ಚರ್ಚಾ ವಿಷಯವಾಗಿ ಬಳಸಿತ್ತು.
ಇನ್ನೊಂದೆಡೆ ರಾಜಭವನಕ್ಕೆ ಸ್ಪಷ್ಟನೆ ಕಳಿಸುತ್ತಿದ್ದಂತೆ ಹಂತಹಂತವಾಗಿ ಒಪ್ಪಿಗೆ ಸಿಕ್ಕಿದ್ದು, ಮೊದಲ ಹಂತದಲ್ಲಿ ಐದು ಹಾಗೂ ಎರಡನೇ ಹಂತದಲ್ಲಿ ಮೂರು ವಿಧೇಯಕಗಳಿಗೆ ಅನುಮತಿ ಸಿಕ್ಕಿದೆ. ಈ ಮೂಲಕ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷದ ಒಂದು ಭಾಗವಾಗಿ ಕಾಣಿಸಿದ್ದ ವಿಧೇಯಕ ಒಪ್ಪಿಗೆ ಕಿರಿಕಿರಿ ಕರಗಿದಂತಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಮಹಡಿ ಕಟ್ಟಿಕೊಳ್ಳಲು ಅನುಮತಿ ನೀಡುವ ಮೂಲಕ ಬೊಕ್ಕಸ ಭರ್ತಿಗೆ ಯೋಜಿಸಿ ರೂಪಿಸಿದ್ದ ವಿಧೇಯಕಕ್ಕೆ ರಾಜ್ಯಪಾಲರು ತಡೆ ಹಾಕಿದ್ದು, ಅಕ್ರಮಸಕ್ರಮವನ್ನು ಬೇರೆ ರೂಪದಲ್ಲಿ ತಂದಿದ್ದೀರಿ, ನಗರದಲ್ಲಿ ಈಗಾಗಲೇ ಮೂಲ ಸೌಕರ್ಯದ ಕೊರತೆ ಇದ್ದು, ಇಂತಹ ತೀರ್ಮಾನ ಮುಂದೆ ಸಮಸ್ಯೆಗೆ ಕಾರಣವಾಗುವುದಿಲ್ಲವೇ ಎಂಬ ರಾಜ್ಯಪಾಲರ ಪ್ರಶ್ನೆಗೆ ಸರ್ಕಾರದಿಂದ ಮನವರಿಕೆ ಸಾಧ್ಯವಾಗಿಲ್ಲ. ಅದೇ ರೀತಿ ಕಂದಾಯ ಇಲಾಖೆಯ ಒಂದು ವಿಧೇಯಕದ ಬಗ್ಗೆ ತಕರಾರು ಎತ್ತಿದ್ದು, ಸರ್ಕಾರದ ಉತ್ತರ ತೃಪ್ತಿಕರವಾಗಿಲ್ಲ.