Most Expensive Phone : ಈ ಆಧುನಿಕ ಜಗತ್ತಿನಲ್ಲಿ ಎಲ್ಲರ ಕೈಯಲ್ಲಿರುವ ಸಾಮಾನ್ಯ ಸಾಧನ ಯಾವುದೆಂದರೆ ಅದು ಫೋನ್. ಸಾಸಿವೆ ಕಾಳಿಲ್ಲದ ಮನೆಯಿಲ್ಲ ಎಂಬ ಮಾತನ್ನು ಈ ಡಿಜಿಟಲ್ ಯುಗಕ್ಕೆ ಅಳವಡಿಸುವುದಾದರೆ, ಫೋನ್ ಇಲ್ಲದ ಸೂರಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ಫೋನ್ ಇಡೀ ಜಗತ್ತನೇ ಆವರಿಸಿಕೊಂಡುಬಿಟ್ಟಿದೆ. ಇಂದು ಸಾವಿರಾರು ಬಗೆಯ ಫೋನ್ಗಳು ನಮ್ಮ ನಡುವೆ ಇವೆ. ಅವುಗಳಲ್ಲಿ ಯಾವುದು ತುಂಬಾ ದುಬಾರಿ ಎಂದು ಪ್ರಶ್ನೆ ಮಾಡಿದರೆ, ಮೊದಲ ಉತ್ತರವೇ ಐಫೋನ್ ಎಂದು ಹೇಳುತ್ತಾರೆ.
ಐಫೋನ್ ಇದ್ದರೆ ಅವರನ್ನು ಶ್ರೀಮಂತರು ಅನ್ನೋ ಕಾಲ ಇತ್ತು. ಆದರೆ, ಈಗ ಕಾಲ ಬದಲಾಗಿದೆ ಅನೇಕ ಯುವ ಸಮುದಾಯ ಅದರಲ್ಲೂ ಮಧ್ಯಮ ವರ್ಗದ ಜನರ ಕೈಯಲ್ಲೂ ಇಂದು ಐಫೋನ್ ಇದೆ. ಅಷ್ಟರಮಟ್ಟಿಗೆ ಈ ಆಧುಕನಿಕ ಜಗತ್ತು ಬೆಳವಣಿಗೆ ಹೊಂದುತ್ತಿದೆ. ದುಬಾರಿ ಫೋನ್ ವಿಚಾರಕ್ಕೆ ಬಂದರೆ, ಅನೇಕರ ಮೊದಲ ಆಯ್ಕೆ ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌ನಂತಹ ಸ್ಮಾರ್ಟ್‌ಫೋನ್‌ಗಳು. ಆದರೆ, ಈ ಎರಡು ಫೋನ್ಗಿಂತಲೂ ಹೆಚ್ಚು ದುಬಾರಿಯಾದ ಫೋನ್ ಈ ಜಗತ್ತಿನಲ್ಲಿ ಇದೆ ಎಂದು ನಿಮಗೆ ತಿಳಿದಿದೆಯೇ? ಆ ಫೋನ್‌ನ ಬೆಲೆಯೊಂದಿಗೆ, ನೀವು ಮೂರು ಖಾಸಗಿ ಜೆಟ್‌ಗಳನ್ನು ಸಹ ಖರೀದಿಸಬಹುದು. ಹಾಗಾದರೆ, ಅತ್ಯಂತ ದುಬಾರಿ ಫೋನ್ ಯಾವುದು ಮತ್ತು ಆ ಫೋನ್‌ನ ಫೀಚರ್ಗಳೇನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್ ಎಂದು ಹೇಳಲಾಗುವ ಈ ಮೊಬೈಲ್ ಗುಲಾಬಿ ವಜ್ರಗಳು, ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳಿಂದ ತಯಾರಿಸಲ್ಪಟ್ಟಿದೆ. ಇದು ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ ಎಡಿಷನ್. ಈ ಆವೃತ್ತಿಯ ಬೆಲೆ 48.5 ಯುಎಸ್ ಮಿಲಿಯನ್ ಡಾಲರ್ ಅಂದರೆ, ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 430 ಕೋಟಿ ರೂಪಾಯಿ. ವರ್ಟು ಪೋರ್ಟಲ್ ಇದನ್ನು ವಿಶ್ವದ ಅತ್ಯಂತ ದುಬಾರಿ ಫೋನ್ ಎಂದು ಬಣ್ಣಿಸಿದೆ. ಇದು ಐಫೋನ್ 6 ರ ಮರು-ಆವೃತ್ತಿ ಮಾದರಿಯಾಗಿದೆ. ಈ ಫೋನ್‌ನ ಬೆಲೆಯೊಂದಿಗೆ, ನೀವು 3 ಖಾಸಗಿ ಜೆಟ್‌ಗಳನ್ನು ಖರೀದಿಸಬಹುದು. ಖಾಸಗಿ ಜೆಟ್‌ನ ಬೆಲೆ ಸಾಮಾನ್ಯವಾಗಿ 100 ಕೋಟಿ ರೂ.ನಿಂದ 140 ಕೋಟಿ ರೂ.ವರೆಗೆ ಇರುತ್ತದೆ. ಇದು ಮೂರು ಖಾಸಗಿ ಜೆಟ್‌ಗಳನ್ನು ಖರೀದಿಸುವ ಬೆಲೆಗೆ ಸಮನಾಗಿರುತ್ತದೆ.
ವರ್ಟು ಪೋರ್ಟಲ್ ಪ್ರಕಾರ, ವಿಶ್ವದ ಅತ್ಯಂತ ದುಬಾರಿ ಫೋನ್ ತಯಾರಿಕೆಯಲ್ಲಿ 24 ಕ್ಯಾರೆಟ್ ಚಿನ್ನ ಮತ್ತು ಗುಲಾಬಿ ವಜ್ರಗಳನ್ನು ಬಳಸಲಾಗಿದೆ. ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ ಆವೃತ್ತಿಯನ್ನು ರಚಿಸಲು 10 ವಾರಗಳು ಬೇಕಾಯಿತು. ಫೋನ್‌ಗಾಗಿ ವಜ್ರಗಳು ಮತ್ತು ಚಿನ್ನವನ್ನು ಪ್ರತ್ಯೇಕವಾಗಿ ಕೈಯಿಂದ ವಿನ್ಯಾಸಗೊಳಿಸಲಾಗಿದೆ. ಈ ಫೋನ್‌ನ ಡಿಸ್ಪ್ಲೇ ಮತ್ತು ಹಾರ್ಡ್‌ವೇರ್ ಬದಲಾಗಿಲ್ಲ. ಐಫೋನ್ 4.7-ಇಂಚಿನ ರೆಟಿನಾ HD ಡಿಸ್ಪ್ಲೇಯನ್ನು ಹೊಂದಿದೆ. ಇದು ಆಪಲ್ A8 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 128 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಈ ಫೋನ್ ಹಿಂಭಾಗ 8-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 1.2-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಚಿನ್ನ ಮತ್ತು ಗುಲಾಬಿ ವಜ್ರಗಳಿಂದಾಗಿ ಈ ಫೋನ್ ದುಬಾರಿ ಸ್ಮಾರ್ಟ್‌ಫೋನ್ ಆಗಿ ಮಾರ್ಪಟ್ಟಿದೆ. (ಏಜೆನ್ಸೀಸ್)