ನ್ಯೂಸ್

ಅರವಿಂದ್​ ಕೇಜ್ರಿವಾಲ್​ ಅತ್ಯಂತ ದೊಡ್ಡ ಅಪ್ರಾಮಾಣಿಕ; ಅನುರಾಗ್​ ಠಾಕೂರ್​ ಹೀಗೆಳಿದ್ದೇಕೆ? | Anurag Thakur

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ರಾಜಕೀಯ ಪ್ರಕ್ಷುಬ್ಧತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲಾ ಚುನಾವಣಾ ಪಕ್ಷಗಳು ಈ ಚುನಾವಣೆಯಲ್ಲಿ ಗೆಲ್ಲಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಈ ಮಧ್ಯೆ ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ವಿರೋಧ ಪಕ್ಷಗಳ ನಾಯಕರನ್ನು ಒಳಗೊಂಡ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಪೋಸ್ಟರ್​​ ಬಿಡುಗಡೆ ನಂತರ ಅರವಿಂದ್ ಕೇಜ್ರಿವಾಲ್ ಅಪ್ರಾಮಾಣಿಕ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅನುರಾಗ್ ಠಾಕೂರ್(Anurag Thakur) ಶನಿವಾರ(ಜನವರಿ 25) ವಾಗ್ದಾಳಿ ಮಾಡಿದ್ದಾರೆ.

ಎಎಪಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಿಡುಗಡೆ ಮಾಡಿರುವ ಪೋಸ್ಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಷಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಪ್ರಮುಖ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಫೋಟೋಗಳು ಇವೆ. ಅಲ್ಲದೆ ಪೋಸ್ಟರ್​ನಲ್ಲಿ ಕೇಜ್ರಿವಾಲ್ ಅವರನ್ನು ಪ್ರಾಮಾಣಿಕ ಎಂದು ಉಲ್ಲೇಖಿಸಲಾಗಿದೆ. ಎಲ್ಲಾ ಅಪ್ರಾಮಾಣಿಕ ಜನರಿಗಿಂತ ಕೇಜ್ರಿವಾಲ್ ಅವರ ಪ್ರಾಮಾಣಿಕತೆ ಮೇಲುಗೈ ಸಾಧಿಸುತ್ತದೆ ಎಂದು ಬರೆಯಲಾಗಿದೆ.

ಈ ಕುರಿತು ಮಾತನಾಡಿದ ಅನುರಾಗ್​ ಠಾಕೂರ್​​, ದೆಹಲಿ ಮುಖ್ಯಮಂತ್ರಿ ಅತಿಶಿ ಅಪ್ರಾಮಾಣಿಕರೇ? ಪೋಸ್ಟರ್‌ನಲ್ಲಿ ಅವರ ಮುಖ ಏಕೆ ಕಾಣೆಯಾಗಿದೆ? ಇದು ನನ್ನ ಏಕೈಕ ಪ್ರಶ್ನೆ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಮಹಿಳೆಯರ ವಿರುದ್ಧವಾಗಿದ್ದು ಮತ್ತು ತನ್ನನ್ನು ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಜನರು ಕೇಜ್ರಿವಾಲ್​ ​ಅವರನ್ನು ಗಮನಿಸುತ್ತಾರೆ ಮತ್ತು ದೆಹಲಿಯಲ್ಲಿ ದೊಡ್ಡ ಅಪ್ರಾಮಾಣಿಕ ವ್ಯಕ್ತಿ ಎಂದು ನಗುತ್ತಾರೆ. ಅವರು ತಮ್ಮನ್ನು 'ದೆಹಲಿ ಕಾ ಶೆಹೆನ್ಶಾ' ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ಮದ್ಯದ ಹಗರಣ ಮಾಡಿದ್ದರಿಂದ ನಾನು ಇದನ್ನು ಹೇಳುತ್ತಿದ್ದೇನೆ. ಅವರ ಮಂತ್ರಿಗಳು, ಶಾಸಕರು ಮತ್ತು ಸಂಸದರು ಜೈಲಿಗೆ ಹೋಗಿದ್ದರು. ಅಲ್ಲದೆ ಅವರು ನಾಚಿಕೆಯಿಲ್ಲದೆ ಪೋಸ್ಟರ್‌ನಲ್ಲಿ ತಮ್ಮ ಮುಖವನ್ನು ಹಾಕಿಕೊಳ್ಳುತ್ತಾರೆ. ಬಾರ್‌ಗಳ ಹಿಂದೆ ಆಡಳಿತದ ಬಗ್ಗೆ ಯೋಚಿಸುವವರನ್ನು ದೆಹಲಿಯ ಜನರು ಆಯ್ಕೆ ಮಾಡುವುದಿಲ್ಲ ಎಂದರು. (ಏಜೆನ್ಸೀಸ್​​)