ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕೂಡು-ಕಳೆಯುವ, ಸೋಷಿಯಲ್ ಇಂಜಿನಿಯರಿಂಗ್ ಜತೆಗೆ ಹಿಂದುತ್ವದ ಅಸ್ತ್ರಕ್ಕೂ ಹೊಳಪು ನೀಡಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳು, ಈ ವಿಚಾರ ಸರ್ಕಾರ ಕೈಗೊಂಡ ಕ್ರಮ ಮತ್ತು ಪಕ್ಷ ತಳೆದ ನಿಲುವಿನ ಬಗ್ಗೆ ಹಿಂದುತ್ವವಾದಿಗಳು, ಪರವಿರುವ ಸಂಘಟನೆಗಳ ಕೆಲ ಮುಖಂಡರು ಅಪಸ್ವರ ಎತ್ತಿದ್ದಾರೆ.
ಸಂಘ-ಪರಿವಾರದ ಪ್ರಭಾವ, ಖದರ್ ಇರುವ ಪ್ರಾಂತಗಳಲ್ಲಿ ಬೇಗುದಿ ಹೆಚ್ಚಿದೆ. ಇದರಿಂದಾಗಿ ಪಕ್ಷ ತೊಂದರೆಗೆ ಸಿಲುಕಲಿದೆ ಎಂದು ಅರಿತು ಎಚ್ಚರಿಕೆ ಹೆಜ್ಜೆಯಿಡಲು ಮುಂದಾಗಿದೆ. ಸಂಘ-ಪರಿವಾರ ಹಾಗೂ ಪಕ್ಷದ ಹಿರಿಯರು ಇತ್ತೀಚೆಗೆ ಸಭೆ ಸೇರಿ ಪ್ರಸಕ್ತ ವಿದ್ಯಮಾನ, ಹಿಂದುಪರ ಸಂಘಟನೆಗಳ ನಿಲುವು-ಒಲವಿನ ಬಗ್ಗೆ ಸಮಾಲೋಚಿಸಿದರು ಎಂದು ಮೂಲಗಳು ತಿಳಿಸಿವೆ. ತತ್ವ-ಸಿದ್ಧಾಂತ, ವಿಚಾರಗಳಲ್ಲಿ ಕಾಂಗ್ರೆಸ್ ನೆರಳಿನಂತೆ ಬಿಜೆಪಿ ವರ್ತಿಸುತ್ತಿದೆ. ಸ್ಪಷ್ಟ, ದೃಢತೆಯಿಂದ ಹೆಜ್ಜೆ ಹಿಂದಕ್ಕೆ ಹಾಕುವುದು ಸರಿಯಲ್ಲವೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸೇರ್ಪಡೆಗೆ ಸಲಹೆ: ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಕೋಪ ಶಮನದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಟಿಕೆಟ್ ನೀಡುವವರ ಪಟ್ಟಿಯಲ್ಲಿ ಮುತಾಲಿಕ್ ಹಾಗೂ ಕೆಲವು ಮಠಾಧೀಶರ ಹೆಸರುಗಳ ಸೇರ್ಪಡೆಗೆ ಸಲಹೆ ನೀಡಿದೆ ಎಂದು ತಿಳಿದಿದೆ. ಸಣ್ಣ, ಸಣ್ಣ ಜಾತಿಗಳು ಅದರಲ್ಲೂ ಹಿಂದು ಸಮುದಾಯದ ಮೇಲೆ ಪ್ರಭಾವಬೀರುವ, ತಮ್ಮದೇ ಆದ ವರ್ಚಸ್ಸುಳ್ಳ ಕೆಲ ಮಠಾಧೀಶರಿಗೆ ಒಪ್ಪಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟರೆ ಸಮಸ್ಯೆ ಬಗೆಹರಿಯುತ್ತದೆ ಎಂಬ ಒತ್ತಾಸೆಗೆ ಬಿಜೆಪಿ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಹಲವು ನಾಯಕರಿಗೆ ಆತಂಕ: ಉತ್ತರಭಾರತದ ಭೌಗೋಳಿಕ, ರಾಜಕೀಯ ನಕ್ಷೆ ಬೇರೆ. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಪರಿಸ್ಥಿತಿ ಬೇರೆ. ಹಿಂದುತ್ವದ ಬದಲಿಗೆ ಅಭಿವೃದ್ಧಿಯೇ ಚುನಾವಣಾ ಕಾರ್ಯಸೂಚಿಯಾದರೆ ಸೂಕ್ತವೆಂದು ರಾಜ್ಯದ ಹಲವು ನಾಯಕರು ಪದೇ ಪದೆ ಗಮನಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಹಿಂದುಪರ ಸಂಘಟನೆಗಳ ಕೆಲ ಮುಖಂಡರು, ಮಠಾಧೀಶರಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರು ಯೋಚಿಸಿದ್ದಿಲ್ಲ, ಬದಲಾದ ಸನ್ನಿವೇಶ ಮರುವಿಮಶಿಸುವಂತೆ ಮಾಡಿದೆ. ಅಭಿವೃದ್ಧಿ ಹಾಗೂ ಹಿಂದುತ್ವ ಸಮಾನವಾಗಿ ಕಾರ್ಯಸೂಚಿಯಲ್ಲಿ ಪ್ರಾಧಾನ್ಯತೆ ನೀಡುವುದಕ್ಕೆ ಒಲವು ವ್ಯಕ್ತಪಡಿಸಿದ್ದು, ಹಿಂದುತ್ವದ ಶಕ್ತಿಗಳನ್ನು ಒಟ್ಟಾಗಿಟ್ಟುಕೊಳ್ಳಲು ಮುಂದಾಗಿದೆ. ಪ್ರತಿಪಕ್ಷ ಕಾಂಗ್ರೆಸ್ಗೆ ಟಕ್ಕರ್ ಕೊಡಲು ಹಿಂದುತ್ವದ ಅಸ್ತ್ರ ಪ್ರಭಾವಿಶಾಲಿಯಾಗಿ ಬಳಸಲು ಬಿಜೆಪಿ ನಿರ್ಧರಿಸಿದ್ದು, ಆಂಶಿಕವಾಗಿ ಉತ್ತರಪ್ರದೇಶ ಮಾದರಿಯನ್ನು ರಾಜ್ಯದ ವಿಧಾನಸಭೆ ಚುನಾವಣೆಗೆ ಅನ್ವಯಿಸಿ ಹಿಂದುಗಳ ವಿಶ್ವಾಸ ಹೆಚ್ಚಿಸಕೊಳ್ಳಲು ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ
ಗ್ರಾಮೀಣ ಪ್ರದೇಶದಲ್ಲಿ ಸಹಬಾಳ್ವೆ, ಸೌಹಾರ್ದತೆ ನೆಲೆಗೊಳಿಸಲು ಉದ್ದೇಶಿತ ‘ವಿನಯ ಸಾಮರಸ್ಯ’ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ಕೊಡಿಸುವ ಚಿಂತನೆಯಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಪ್ರತಿ ಹಳ್ಳಿಯಲ್ಲಿ ಅಸ್ಪಶ್ಯತೆ ನಿವಾರಣೆ ಆಂದೋಲನ ನಡೆಸುವುದು ಕಾರ್ಯಕ್ರಮದ ಆಶಯ. ಸಿಎಂ ಬಸವರಾಜ ಬೊಮ್ಮಾಯಿ ಪ್ರಸಕ್ತ ವರ್ಷದ ಬಜೆಟ್ನಲ್ಲಿ ಕಾರ್ಯಕ್ರಮ ಪ್ರಕಟಿಸಿ 20 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಮುಖ್ಯಮಂತ್ರಿ ಮುಖೇನ ಮೋದಿಯವರ ಕಾಲಾವಕಾಶ ಕೋರಲಾಗುತ್ತದೆ. ಇಲ್ಲವಾದರೆ ಸಿಎಂ ಬೊಮ್ಮಾಯಿ ಅವರೇ ಚಾಲನೆ ನೀಡಲಿದ್ದು, ಫೆಬ್ರವರಿ ಅಂತ್ಯದೊಳಗೆ ‘ವಿನಯ ಸಾಮರಸ್ಯ’ ಜಾರಿಗೆ ತೀರ್ವನಿಸಲಾಗಿದೆ ಎಂದು ‘ವಿಜಯವಾಣಿ’ಗೆ ತಿಳಿಸಿದರು. ದೇವಸ್ಥಾನ ಪ್ರವೇಶಿಸಿದ ಬಾಲಕನಿಗೆ ದಂಡ ವಿಧಿಸಲಾಗುತ್ತಿದೆ. ನೊಂದ ವಿನಯ ಹೆಸರಿನಲ್ಲೇ ಈ ಕಾರ್ಯಕ್ರಮ ಪ್ರಕಟಿಸಲಾಗಿದೆ. ಬಾಲಕ ಸದ್ಯಕ್ಕೆ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಉನ್ನತ ಶಿಕ್ಷಣ ಬಯಸಿದರೆ ವಿದೇಶಿ ವ್ಯಾಸಂಗ ಖರ್ಚು ಭರಿಸುವ ಜವಾಬ್ದಾರಿ ಸರ್ಕಾರ ತೆಗೆದುಕೊಂಡಿದೆ. ಜಾತಿ ಸಂಕೋಲೆಗಳಿಂದ ಜನರನ್ನು ಮುಕ್ತಗೊಳಿಸಿ, ಪ್ರತಿ ಹಳ್ಳಿ, ನಗರ-ಪಟ್ಟಣಗಳಲ್ಲಿ ಜನರು ಪರಸ್ಪರ ಅನೋನ್ಯವಾಗಿ ಬಾಳಬೇಕು ಎಂಬ ಅಪೇಕ್ಷೆಯೊಂದಿಗೆ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ ಎಂದರು.
ಮಂಜೂರು ನಿರ್ಧಾರ: ಅಲೆಮಾರಿ ಸಮುದಾಯಗಳ ಬಹು ವರ್ಷಗಳ ಬೇಡಿಕೆಯಾದ ತಲೆ ಮೇಲೊಂದು ಸೂರು ನೀಡುವ ಬೇಡಿಕೆಯನ್ನು ಈಡೇರಿಸಲು ಮುಂದಾಗಿದ್ದು, 10 ಸಾವಿರ ಮನೆಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಅಲೆಮಾರಿ ಸಮುದಾಯದಲ್ಲಿ ಒಟ್ಟು 52 ಉಪಪಂಗಡಗಳಿವೆ. ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಡಲಾಗುತ್ತಿದ್ದು, ಇದಕ್ಕಾಗಿ 300 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಸಿಎಂ ಬೊಮ್ಮಾಯಿ ಕಾಲಾವಕಾಶ ಕೋರಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ ಅಂತ್ಯದೊಳಗೆ ಈ ಕಾರ್ಯಕ್ರಮ ಏರ್ಪಡಿಸಿ ಫಲಾನುಭವಿ ಅಲೆಮಾರಿಗಳಿಗೆ ವಸತಿ ಮಂಜೂರು ಪತ್ರ ವಿತರಿಸಲಾಗುವುದು ಎಂದರು. ರಾಜ್ಯದಲ್ಲಿ 200-300 ಪ್ರತಿಷ್ಠಿತರ ಶಾಲೆಗಳಲ್ಲಿ ವಾರ್ಷಿಕ ಐದು ಸಾವಿರ ಮಕ್ಕಳ ಪ್ರವೇಶಕ್ಕೆ ಅವಕಾಶ ಕೊಡಿಸಿದ್ದು, ಇದಕ್ಕಾಗಿ 25-30 ಕೋಟಿ ರೂ.ಗಳನ್ನು ಸರ್ಕಾರ ಭರಿಸುತ್ತದೆ.
ಅಲೆಮಾರಿ, ದೇವದಾಸಿ, ಸ್ಮಶಾನ, ಸಫಾಯಿ, ಪೌರ ಕಾರ್ವಿುಕರ ಮಕ್ಕಳು, ಕರೊನಾ, ಏಡ್ಸ್ನಿಂದ ಪಾಲಕರು ಮೃತಪಟ್ಟು ಅನಾಥರಾದ, ಕಡು ಬಡ ಮಕ್ಕಳಿಗೆ ಈ ಯೋಜನೆ ಪ್ರಯೋಜವಾಗಲಿದೆ. ಅಲ್ಲದೆ, 830 ವಸತಿ ಶಾಲೆಗಳ ಪ್ರವೇಶಕ್ಕೆ ಇದೇ ಸಮುದಾಯದ ಮಕ್ಕಳಿಗೆ ಮೊದಲ ಆದ್ಯತೆ ನೀಡಿದ್ದು, ಅಂತರ್ಜಾತಿ ವಿವಾಹ ಪ್ರೋತ್ಸಾಹಧನಡಿ ಬಾಕಿಯಿದ್ದ 150 ಕೋಟಿ ರೂ. ಚುಕ್ತಾ ಮಾಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.