ಸಾಂಧರ್ಬಿಕ ಚಿತ್ರ 
ನ್ಯೂಸ್

ಗೋವಿಂದಪುರದಲ್ಲಿ ಅಗ್ನಿ ಅವಘಡ: 45 ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗೆ ಆಹುತಿ

ಬೆಂಗಳೂರು: ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಿಂದ ಕೂಲಿ ಕಾರ್ಮಿಕರು ವಾಸವಿದ್ದ ಅಂದಾಜು ೪೫ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗೆ ಆಹುತಿಯಾಗಿದೆ.

ಗೋವಿಂದಪುರದ ವೀರಣ್ಣಪಾಳ್ಯ ಮುಖ್ಯರಸ್ತೆಯ ಚಾಣಾಕ್ಯ ಲೇಔಟ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ಚಾಣಾಕ್ಯ ಲೇಔಟ್‌ನ ಚೈತನ್ಯ ಶಾಲೆ ಹಿಂಭಾಗದಲ್ಲಿ ಪ್ರಕಾಶ್ ಪೌಲ್ ಎಂಬುವರಿಗೆ ಸೇರಿದ ಸುಮಾರು ಒಂದು ಎಕರೆಗೂ ಅಧಿಕ ಜಾಗ ಇದೆ. ಅದರಲ್ಲಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ಮೂಲದ ಕಟ್ಟಡ ಕಾರ್ಮಿಕರು ಸೇರಿ ಸುಮಾರು ೧೦೦ಕ್ಕೂ ಹೆಚ್ಚು ಕಾರ್ಮಿಕರು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಜಾಗದ ಮಾಲೀಕ ಪ್ರತಿ ಶೆಡ್‌ಗೆ ಇಂತಿಷ್ಟು ಬಾಡಿಗೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ೮ ಗಂಟೆಯಿಂದ ೧೦ ಗಂಟೆ ಅವಧಿಯಲ್ಲಿ ಒಂದು ಶೆಡ್‌ನಲ್ಲಿ ಬೆಂಕಿ ಕಾಣಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಕ್ಕ-ಪಕ್ಕವಿದ್ದ ೪೫ಕ್ಕೂ ಹೆಚ್ಚು ಶೆಡ್‌ಗಳಿಗೆ ಬೆಂಕಿ ತಗುಲಿ ನೋಡನೋಡುತ್ತಿದ್ದಂತೆ ಎಲ್ಲಾ ಶೆಡ್‌ಗಳು ಸುಟ್ಟು ಭಸ್ಮವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟವಾದ ಬೆಂಕಿ ಹಾಗೂ ಹೊಗೆ ಕಂಡ ಸ್ಥಳೀಯರು, ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ನಂತರ ನಾಲ್ಕೈದು ಅಗ್ನಿ ಶಾಮಕ ವಾಹನಗಳ ಜತೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಪ್ರಾಣ ಹಾನಿಯಾಗಿಲ್ಲ:

ಈ ಶೆಡ್‌ಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು, ಆಟಿಕೆ ತಯಾರಿಕಾ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ, ಬಲೂಲ್ ಮಾರಾಟಗಾರರು ಸೇರಿ ವಿವಿಧ ಮಾದರಿಯ ಸುಮಾರು ೧೦೦ಕ್ಕೂ ಅಧಿಕ ಮಂದಿ ಕಾರ್ಮಿಕರು ವಾಸವಾಗಿದ್ದರು. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ತಮ್ಮ ಕೆಲ ವಸ್ತುಗಳನ್ನು ತೆಗೆದುಕೊಂಡು ಶೆಡ್‌ಗಳಿಂದ ಹೊರ ಓಡಿ ಬಂದಿದ್ದಾರೆ. ಈ ವೇಳೆ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಅದನ್ನು ಹೊರತು ಪಡಿಸಿದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅವಘಡದಿಂದ ಆತಂಕಗೊಂಡ ಕಾರ್ಮಿಕರು, ಸಮೀಪದ ದೇವಾಲಯಗಳ ಆವರಣ ಹಾಗೂ ಪಾರ್ಕ್‌ಗಳಲ್ಲಿ ತಂಗಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಸಾಮಾನ್ಯವಾಗಿ ಕಾರ್ಮಿಕರು, ಶೆಡ್‌ಗಳ ಹೊರಭಾಗದಲ್ಲೇ ಅಡುಗೆ ಮಾಡುತ್ತಾರೆ.ಈ ವೇಳೆ ಯಾವುದೋ ಶೆಡ್ ಬಳಿ ಅಡುಗೆ ಮಾಡುವಾಗ ತಗುಲಿದ ಬೆಂಕಿ ಇಷ್ಟು ದೊಡ್ಡ ಅನಾಹುತಕ್ಕೆ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.