ನ್ಯೂಸ್

ಬಾಡಿಗೆದಾರರು ಬೇಕಾಗಿದ್ದಾರೆ: ನಗರದೆಲ್ಲೆಡೆ ಟು ಲೆಟ್ ಬೋರ್ಡ್, 2 ಲಕ್ಷಕ್ಕೂ ಹೆಚ್ಚಿನ ಮನೆ ಖಾಲಿ

| ಗಿರೀಶ್ ಗರಗ ಬೆಂಗಳೂರು

ಕರೊನಾ ಅಬ್ಬರಕ್ಕೆ ಬೆಚ್ಚಿದ ಜನರು ಬೆಂಗಳೂರು ಖಾಲಿ ಮಾಡಿದ್ದಾರೆ. ಹೀಗಾಗಿ ವಸತಿ ಪ್ರದೇಶಗಳಲ್ಲಿರುವ ಮನೆಗಳ ಮುಂದೆ ‘ಟು ಲೆಟ್’ ಬೋರ್ಡ್​ಗಳು ನೇತು ಬಿದ್ದಿವೆ. ಮನೆ ಮಾಲೀಕರು ಶೇ.10 ಬಾಡಿಗೆ ಮತ್ತು ಮುಂಗಡ ಮೊತ್ತ ತಗ್ಗಿಸಿದ್ದಾರೆ.

ಬೆಂಗಳೂರಿನಲ್ಲಿ 15 ಲಕ್ಷಕ್ಕೂ ಹೆಚ್ಚಿನ ಕಟ್ಟಡಗಳಿದ್ದು, ಅವುಗಳಲ್ಲಿ 10 ಲಕ್ಷಕ್ಕೂ ಹೆಚ್ಚಿನ ವಸತಿ ಕಟ್ಟಡಗಳಿವೆ. ಅವುಗಳಲ್ಲಿ ಲಕ್ಷಕ್ಕೂ ಹೆಚ್ಚಿನ ಫ್ಲ್ಯಾಟ್​ಗಳನ್ನೊಳಗೊಂಡ 10 ಸಾವಿರಕ್ಕೂ ಹೆಚ್ಚಿನ ಅಪಾರ್ಟ್​ವೆುಂಟ್​ಗಳಿವೆ. ಪ್ರಸ್ತುತ ಐಷಾರಾಮಿ ಅಪಾರ್ಟ್​ವೆುಂಟ್​ಗಳು, ವಸತಿ ಕಟ್ಟಡಗಳಲ್ಲಿನ ಶೇ.10ಕ್ಕೂ ಹೆಚ್ಚಿನ ಮನೆಗಳನ್ನು ಬಾಡಿಗೆದಾರರು ಖಾಲಿ ಮಾಡಿದ್ದಾರೆ. ಹೀಗೆ ಖಾಲಿ ಮಾಡಿದವರಲ್ಲಿ ಬಹುತೇಕರು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು. ಮೂಲದ ಪ್ರಕಾರ, 2 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳ ಪೈಕಿ ಶೇ.50 ಜನರು 1 ಬೆಡ್ ರೂಂ ಮನೆಯಲ್ಲಿದ್ದವರು. ಉಳಿದಂತೆ 2 ಮತ್ತು 3 ಬೆಡ್ ರೂಂ ಮನೆಗಳು ಹಾಗೂ ಅಪಾರ್ಟ್ ಮೆಂಟ್​ಗಳಲ್ಲಿನ ಫ್ಲ್ಯಾಟ್​ಗಳಲ್ಲಿ ಬಾಡಿಗೆಗಿದ್ದವರು.

ಕರೊನಾ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೂ ಮುಂಚೆ, ಮನೆಗಳನ್ನು ಖಾಲಿ ಮಾಡುವವರು ಮಕ್ಕಳ ಶೈಕ್ಷಣಿಕ ಅವಧಿ ಮುಗಿಯುವವರೆಗೆ ಕಾಯುತ್ತಿದ್ದರು. ಆದರೀಗ ಕರೊನಾ ಭೀತಿಯಿಂದ ಶಾಲೆ, ಕಾಲೇಜುಗಳು ಆರಂಭ ವಾಗಿಲ್ಲ. ಹೀಗಾಗಿ ಮನೆ ಖಾಲಿ ಮಾಡಿ ಬೇರೆಡೆ ತೆರಳುವವರಿಗೆ ಯಾವುದೇ ಅಡ್ಡಿ ಇಲ್ಲ.

ಎಲ್ಲೆಡೆ ಫಲಕಗಳು: ಬೆಂಗಳೂರಿನಲ್ಲಿ ಸಾಮಾನ್ಯ ವಾಗಿ ಮೇ ಅಂತ್ಯದಿಂದ ಜುಲೈ ಆರಂಭದವರೆಗೆ ಹೆಚ್ಚಾಗಿ ಮನೆ ಖಾಲಿಯಿದೆ ಎಂಬ ಫಲಕಗಳು ಹೆಚ್ಚಾಗಿ ಕಾಣಿಸುತ್ತಿದ್ದವು. ಆದರೀಗ, ಕಳೆದ ಏಪ್ರಿಲ್​ನಿಂದಲೇ ಅಂತಹ ಫಲಕಗಳು ಗೋಚರಿಸುತ್ತಿವೆ. ಅದರಲ್ಲೂ ಜೂನ್ ಆರಂಭದ ನಂತರ ಆ ರೀತಿ ಮನೆ ಖಾಲಿಯಿದೆ ಎಂಬ ಬೋರ್ಡ್ ಹೆಚ್ಚುವಂತಾಗಿದೆ. ಡಿಸೆಂಬರ್ ಅಂತ್ಯದವರೆಗೆ ಮನೆ ಖಾಲಿಯ ಫಲಕಗಳು ಕಾಣಿಸುವ ಸಾಧ್ಯತೆಗಳಿವೆ.

ಬಾಡಿಗೆ ನೆಚ್ಚಿಕೊಂಡವರಿಗೆ ಹೊಡೆತ: ನಿವೃತ್ತಿ ಜೀವನ ಸಾಗಿಸತ್ತ ಅಥವಾ ಬ್ಯಾಂಕ್ ಸಾಲ ಪಡೆದು ಮನೆ ನಿರ್ವಿುಸಿದವರು ಸಾಲ ಮರುಪಾವತಿ ಹಾಗೂ ಜೀವನ ಸಾಗಿಸಲು ಬಾಡಿಗೆ ರೂಪದಲ್ಲಿ ಬರುವ ಆದಾಯ ನೆಚ್ಚಿಕೊಂಡಿದ್ದರು. ಇದೀಗ ಮನೆಗಳು ಖಾಲಿ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದ್ದು, ಮಾಲೀಕರಿಗೆ ಮಾಸಿಕ ಆದಾಯವೇ ಇಲ್ಲದಂತಾಗಿದೆ. ಜೀವನ ಸಾಗಿಸುವುದೇ ಕಷ್ಟ ಎನ್ನುವಂತಾಗಿದೆ.

ಬೆಂಗಳೂರಿನಲ್ಲಿ ಕರೊನಾ ಭೀತಿ ಜತೆಗೆ, ಉದ್ಯೋಗದ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದೆ. | ಎಚ್. ರಾಮಪ್ಪ ರಿಯಲ್ ಎಸ್ಟೇಟ್ ಏಜೆಂಟ್

ವಾಣಿಜ್ಯ ಮಳಿಗೆಗಳು ಖಾಲಿ

ವಸತಿ ಕಟ್ಟಡಗಳಷ್ಟೇ ಅಲ್ಲದೆ, ವಾಣಿಜ್ಯ ಮಳಿಗೆಗಳೂ ಖಾಲಿಯಾಗಿವೆ. ವಾಣಿಜ್ಯ ಕಟ್ಟಡಗಳ ಪೈಕಿ ಶೇ. 5 ಈಗಾಗಲೇ ಖಾಲಿಯಾಗಿವೆ. ಅದರಲ್ಲೂ ಸಣ್ಣ ಹೋಟೆಲ್, ಬೀಡಾ ಅಂಗಡಿ, ಚಾಟ್ಸ್ ಸ್ಟಾಲ್​ಗಳಂತಹ ಸಣ್ಣ ಮಳಿಗೆಗಳನ್ನು ವ್ಯಾಪಾರಿಗಳು ಖಾಲಿ ಮಾಡಿದ್ದಾರೆ.

ವೆಬ್​ಸೈಟ್ ಮೂಲಕ ಹುಡುಕಾಟ

ಮನೆಗಳನ್ನು ಹುಡುಕುವವರು ಹೆಚ್ಚಾಗಿ ನಗರದ ಹೊರವಲಯಗಳತ್ತ ತೆರಳುತ್ತಿದ್ದಾರೆ. ನಗರದ ಕೇಂದ್ರ ಭಾಗಗಳಿಗೆ ಹೋಲಿಸಿದರೆ ಎಲೆಕ್ಟ್ರಾನಿಕ್​ಸಿಟಿ, ಬೈಯಪ್ಪನಹಳ್ಳಿ, ಬೊಮ್ಮನಹಳ್ಳಿ, ಯಲಹಂಕಗಳಲ್ಲಿ ಬಾಡಿಗೆ ಮನೆಯ ಹುಡುಕಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ವಿವಿಧ ರಿಯಲ್ ಎಸ್ಟೇಟ್ ವೆಬ್​ಸೈಟ್​ಗಳ ಮೂಲಕ ಬಾಡಿಗೆ ಮನೆ ಹುಡುಕುವವರು ಹೆಚ್ಚಾಗಿದ್ದಾರೆ.

ಬಾಡಿಗೆ, ಮುಂಗಡ ಹಣ ಇಳಿಕೆ

ಜಯನಗರ, ಬಸವನಗುಡಿಯಂತಹ ಪ್ರದೇಶಗಳಲ್ಲಿಯೇ ಬಾಡಿಗೆ ಮೊತ್ತವನ್ನು ಶೇ. 10 ಇಳಿಕೆ ಮಾಡಲಾಗಿದೆ. 1 ಬೆಡ್ ರೂಂ ಮನೆಗೆ ಈ ಹಿಂದೆ 8 ಸಾವಿರ ರೂ. ಪಡೆಯುತ್ತಿದ್ದರೆ, ಈಗ ಅದೇ ಮನೆಯ ಬಾಡಿಗೆ 7ರಿಂದ 7,500 ರೂ. ನಿಗದಿ ಮಾಡಲಾಗುತ್ತಿದೆ. ಅಲ್ಲದೆ, ಮುಂಗಡ ಹಣವನ್ನು 80 ಸಾವಿರ ರೂ.ನಿಂದ 60 ಸಾವಿರದಿಂದ 70 ಸಾವಿರ ರೂ.ಗೆ ಇಳಿಸಲಾಗುತ್ತಿದೆ.