ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಚ್.ಎಆರ್.ಬಸವರಾಜಪ್ಪ, ಹಿಟ್ಟೂರು ರಾಜು, ಹನುಮಮ್ಮ, ಜಿ.ಜಿ.ಅಕ್ಕಮ್ಮ, ಸರೋಜಮ್ಮ, ಆರ್.ಮಂಜುಳಾ, ಜಯಲಕ್ಷ್ಮಿ ಇತರರಿದ್ದರು. 
ನ್ಯೂಸ್

ಕಾರ್ಮಿಕ ವಿರೋಧಿ ನೀತಿ ವಿರುದ್ಧ 18ಕ್ಕೂ ಅಧಿಕ ಸಂಘಟನೆಗಳ ಪ್ರತಿಭಟನೆ

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿಗಳು ಹಾಗೂ ಕಾರ್ಪೊರೇಟ್ ಪರವಾದ ನಿಲುವು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕಾರ್ಮಿಕ ಸಂಘಟನೆಗಳ ಜಂಟಿ ಕರೆ ಮೇರೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿ 18ಕ್ಕೂ ಅಧಿಕ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಶೋಕ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಗೆ ನಡೆಸಿದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಅಕ್ಷರ ದಾಸೋಹ, ಅಂಗನವಾಡಿ ನೌಕರರ ಸಂಘ, ಗ್ರಾಪಂ ನೌಕರರ ಸಂಘ, ವಿಮಾ ನೌಕರರ ಸಂಘ, ಅಂಚೆ ನೌಕರರ ಸಂಘ, ಗುತ್ತಿಗೆ ಕಾರ್ಮಿಕರ ಸಂಘ, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಪ್ರಮುಖರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಬೇಕು. ರೈತರಿಗೆ ರಕ್ಷಣೆ ಕೊಡಬೇಕು. ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ವಿದ್ಯುತ್ ಖಾಸಗೀಕರಣ ನಿಲ್ಲಿಸಿ, ನೀರಾವರಿ ಯೋಜನೆ ಜಾರಿಗೊಳಿಸಬೇಕು. ಬಗರ್‌ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ಭೂಮಿ ಕೊಡಬೇಕು. ಕಾರ್ಪೋರೇಟ್ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ, ಭಾಗ್ಯಾ ರಾಘವೇಂದ್ರ, ಕೆ.ರಾಘವೇಂದ್ರ, ಪಿ.ಡಿ.ಮಂಜಪ್ಪ, ಎಂ.ಮಂಜಪ್ಪ, ಪಿ.ಶೇಖರಪ್ಪ, ಗುರುಶಾಂತ, ಎಂ.ಡಿ ನಾಗರಾಜ್, ಎಂ.ನಾರಾಯಣ, ಹನುಮಮ್ಮ, ಜಿ.ಜಿ.ಅಕ್ಕಮ್ಮ, ಸರೋಜಮ್ಮ, ಶಾರದಾ, ಆರ್.ಮಂಜುಳಾ, ಜಯಲಕ್ಷ್ಮಿ, ಬಂಗಾರಪ್ಪ, ರವಿ, ಕುಲಕರ್ಣಿ, ಅಶೋಕ್ ಇತರರಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದುಡಿಯುವ ವರ್ಗದ ಜನರ ಪರವಾಗಿಲ್ಲ. ಕೇವಲ ಕಾರ್ಪೋರೆಟ್ ಕಂಪನಿಗಳ, ಬಂಡವಾಳಶಾಹಿಗಳ ಪರವಾಗಿರುವ ಕಾಯ್ದೆಗಳನ್ನು ಎರಡೂ ಸರ್ಕಾರಗಳು ಪೈಪೋಟಿಗೆ ಬಿದ್ದು ಜಾರಿಗೊಳಿಸುತ್ತಿವೆ. - ಎಚ್.ಆರ್.ಬಸವರಾಜಪ್ಪ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ