ಬೆಂಗಳೂರು: ಪ್ರಧಾನಿ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳು ಕೈಗಾರಿಕಾ ಕ್ಷೇತ್ರದ ಮೇಲೆ ಸಂಜೀವಿನಿಯಂತೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದರು.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್‌ನ ವಿದ್ಯುನ್ಮಾನ ಘಟಕಕ್ಕೆ ಭೇಟಿ ನೀಡಿದ ವೇಳೆ ಅಧಿಕಾರಿಗಳು ಮತ್ತು ಕಾರ್ಮಿಕರ ಜತೆ ಸಂವಾದ ನಡೆಸಿ ಮಾತನಾಡಿದರು.
ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಎಲ್ಲ ಸಾಧ್ಯತೆ ಮುಂದಿಟ್ಟುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ನಿರಂತರವಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಭಾರತದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಲು ಕೈಗಾರಿಕಾ ಉತ್ಪನ್ನ ಹೆಚ್ಚಳ ಮಾಡುವುದು ನಮ್ಮ ಸರ್ಕಾರದ ಉದ್ದೇಶ. ಅದಕ್ಕಾಗಿ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಪರಿಕಲ್ಪನೆಗಳು ಹೆಚ್ಚು ಪರಿಣಾಮಕಾರಿ ಆಗಿವೆ. ಇದೇ ಪರಿಕಲ್ಪನೆ ಅಡಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಯನ್ನು ಮತ್ತಷ್ಟು ಸಶಕ್ತಗೊಳಿಸಲಾಗುವುದು ಎಂದು ಹೇಳಿದರು.
ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಪೈಕಿ ಬಿಎಚ್‌ಇಎಲ್ ಉತ್ತಮವಾಗಿ ನಡೆಯುತ್ತಿದೆ. ಕೈಗಾರಿಕೆ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಸಾರ್ವಜನಿಕ ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಇಂಥ ಸವಾಲಿನ ನಡುವೆಯೂ ಬಿಎಚ್‌ಇಎಲ್ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಬಿಎಚ್‌ಇಎಲ್ ಕೊಡುಗೆ ಅಸಾಧಾರಣವಾಗಿದೆ, ಥರ್ಮಲ್ ವಿದ್ಯುತ್ ಕ್ಷೇತ್ರದಲ್ಲಿ ಶೇ.40ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಕಂಪನಿ ಹೊಂದಿದೆ. ಭಾರತೀಯ ಸೇನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಕಂಪನಿ ಕೊಡುಗೆ ಅನನ್ಯ ಎಂದರು.
ಬಿಎಚ್‌ಇಎಲ್ ಕಂಪನಿಗೆ ದೊಡ್ಡ ಪ್ರಮಾಣದ ಬೇಡಿಕೆಗಳಿಗೆ ಬರುತ್ತಿವೆ. ಆದರೆ ಲಾಭ ಅಷ್ಟು ತೃಪ್ತಿದಾಯಕವಾಗಿ ಇಲ್ಲ. ನೀವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ನಷ್ಟಕ್ಕೆ ಸಿಲುಕದ ಹಾಗೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳು, ಕಾರ್ಮಿಕರ ಮೇಲೆಯೇ ಇದೆ ಎಂದು ಒತ್ತಿ ಹೇಳಿದರು.
ಎಚ್‌ಎಂಟಿ, ಬೆಮೆಲ್, ಐಟಿಐ, ಎಚ್‌ಎಎಲ್, ಬಿಇಎಲ್, ಬಿಇಎಂಎಲ್ ಸೇರಿದಂತೆ ಅನೇಕ ಕೈಗಾರಿಕೆಗಳಿಗೆ ಬೆಂಗಳೂರು ಹೆಸರುವಾಸಿಯಾಗಿದೆ. ಅದರೆ ಇವುಗಳಲ್ಲಿ ಕೆಲವು ನಷ್ಟದ ಹಾದಿ ಹಿಡಿದಿವೆ. ಅಂತಹ ಪರಿಸ್ಥಿತಿ ಬಿಎಚ್‌ಇಎಲ್‌ಗೆ ಬರುವುದು ಬೇಡ ಎಂದು ಹೇಳಿದರು.
ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಂ ಬಾಬು ಸೇರಿದಂತೆ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.