ಮದ್ದೂರು : ತಾಲೂಕಿನಾದ್ಯಂತ ಕಾಲನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಮಾದರಿ ಕಾಲನಿಗಳನ್ನಾಗಿ ನಿರ್ಮಿಸಲು ಪಣ ತೊಟ್ಟಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ನಿಡಘಟ್ಟ ಗ್ರಾ.ಪಂ. ವ್ಯಾಪ್ತಿಯ ಕೊಂಗಬೋರನ ದೊಡ್ಡಿ, ಮಾದಾಪುರದದೊಡ್ಡಿ ಹಾಗೂ ನಿಡಘಟ್ಟ ಕಾಲನಿಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ 70 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈಗಾಗಲೇ ತಾಲೂಕಿನಾದ್ಯಂತ ಒಂದು ಕೋಟಿ ರೂ. ವೆಚ್ಚದ ಅಭಿವೃದ್ಧಿಗೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ತಾವು ಶಾಸಕರಾದ ಬಳಿಕ 15 ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸಿ ಹಲವಾರು ವರ್ಷಗಳಿಂದಲೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದ ಹಲವು ಗ್ರಾಮಗಳಿಗೆ ಅನುದಾನವನ್ನು ಹಂಚಿಕೆ ಮಾಡಿ ರಸ್ತೆ, ಚರಂಡಿ ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಮಾದರಿ ಗ್ರಾಮವನ್ನಾಗಿಸುತ್ತಿರುವುದಾಗಿ ಹೇಳಿದರು.
ತಾಲೂಕಿನ ನಿಡಘಟ್ಟ ಗ್ರಾ.ಪಂ. ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶೇ. 98 ಕಾಮಗಾರಿಗಳು ಪೂರ್ಣಗೊಂಡಿದ್ದು ಉಳಿಕೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಕೆಲ ಗ್ರಾಮಗಳಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳ ಪಟ್ಟಿ ತಯಾರಿಸಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಈ ಹಿಂದೆ ಅಧಿಕಾರ ನಡೆಸಿದ ಜನಪ್ರತಿನಿಧಿಗಳು ಜನರ ಕಣ್ಣೊರೆಸುವ ಮತ್ತು ಮೆಚ್ಚುಗೆಗೆ ಮುಂದಾಗಿ ಅನುಮೋದನೆ ಪಡೆಯದೆ ತಾಲೂಕಿನ ವಿವಿಧೆಡೆ ಭೂಮಿಪೂಜೆ ನೆರವೇರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಜತೆಗೆ ಅನುದಾನ ಬಿಡುಗಡೆಯಾಗದಿದ್ದರೂ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ತಮ್ಮ ಗಮನಕ್ಕೆ ಬಂದಿದ್ದು ಅಂತಹ ಕಾಮಗಾರಿಗಳ ಪಟ್ಟಿ ತಯಾರಿಸಿ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಕೆಲ ಗ್ರಾಮಗಳಲ್ಲಿ ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಲು ತಮ್ಮ ಅನುದಾನದಲ್ಲಿ ಹಣ ಬಿಡುಗಡೆಗೊಳಿಸಿದ್ದು ತಾಲೂಕಿನ ವಿವಿದೆಡೆಗಳಲ್ಲಿ ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನಗಳ ಪುನಶ್ಚೇತನಕ್ಕೆ ಕಾಯಕಲ್ಪ ಕಲ್ಪಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತಾವು ಶಾಸಕರಾದ ಬಳಿಕ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಜತೆಗೆ ಸರ್ಕಾರದ ಯೋಜನೆಗಳು ಅರ್ಹ ಪಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಗ್ರಾಮದಲ್ಲಿರುವ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಮತ್ತಷ್ಟು ವೇಗ ಕಲ್ಪಿಸುವುದಾಗಿ ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಗ್ರಾ.ಪಂ. ಸದಸ್ಯರಾದ ರಾಜಣ್ಣ,ಚಿಕ್ಕಪುಟ್ಟೇಗೌಡ, ಸತೀಶ್, ಮಹೇಶ್, ಮಾಜಿ ಅಧ್ಯಕ್ಷ ಎನ್.ಆರ್.ಪ್ರಕಾಶ್, ಮುಖಂಡರಾದ ಸ್ವಾಮಿ, ದೀಪು ಇದ್ದರು.