ನ್ಯೂಸ್

ಅಮೆರಿಕದಲ್ಲಿ ಜನಾಂಗೀಯ ಕಿಚ್ಚು: ವರ್ಣಭೇದ ವಿರುದ್ಧ ಆಕ್ರೋಶ ಸ್ಫೋಟ, 25 ನಗರಗಳಲ್ಲಿ ಕರ್ಫ್ಯೂ

ಮಿನ್ನಿಯಾಪೋಲಿಸ್: ಆಫ್ರಿಕಾ ಮೂಲದ ವ್ಯಕ್ತಿಯನ್ನು ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪೊಲೀಸರ ವಿರುದ್ಧ ಆರಂಭಗೊಂಡ ಜನಾಂಗೀಯ ಸಂಘರ್ಷ ಅಮೆರಿಕದಲ್ಲಿ ತಾರಕಕ್ಕೇರಿದ್ದು 25 ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಪೊಲೀಸರ ವರ್ಣಭೇದ ನೀತಿ ವಿರೋಧಿಸಿ ಮಿನ್ನೆಸೋಟಾ ರಾಜ್ಯದ ಮಿನ್ನಿಯಾಪೋಲಿಸ್​ನಲ್ಲಿ ಶುರುವಾದ ಪ್ರತಿಭಟನೆ ಲಾಸ್ ಏಂಜಲೀಸ್, ಷಿಕಾಗೊ, ಅಟ್ಲಾಂಟ, ಮಿಯಾಮಿ, ಸ್ಯಾನ್ ಫ್ರಾನ್ಸಿಸ್ಕೊ ಸೇರಿದಂತೆ 17 ರಾಜ್ಯಗಳಿಗೆ ಹಬ್ಬಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈವರೆಗೆ 1,400ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಉಗ್ರರೂಪದ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ. ಹಲವೆಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಆಗದ ಕಾರಣ ರಾಷ್ಟ್ರೀಯ ಪಡೆಯ ಸಾವಿರಾರು ಯೋಧರು, ಮಿಲಿಟರಿ ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಮಿನ್ನಿಯಾಪೋಲಿಸ್ ಮತ್ತು ಸೇಂಟ್ ಪೌಲ್, ಮಿಯಾಮಿಗಳಲ್ಲಿ ಅಂಗಡಿಗಳನ್ನು ಲೂಟಿ ಮಾಡಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ, ಸ್ಟೆನ್ ಗ್ರೆನೇಡ್​ಗಳನ್ನು ಬಳಸಿದ್ದಾರೆ. ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಮೆರಿಕದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಕರೊನಾಗೆ ಬಲಿಯಾಗಿರುವ ಸಂದರ್ಭದಲ್ಲಿ ಹಿಂಸೆ ಭುಗಿಲೆದ್ದಿರುವುದು ವೈದ್ಯಕೀಯ ಇಲಾಖೆಯನ್ನು ಆತಂಕಕ್ಕೆ ತಳ್ಳಿದೆ. ಮತ್ತೊಂದೆಡೆ ಪ್ರತಿಭಟನೆ ಕೆನಡಾಗೂ ವಿಸ್ತರಿಸಿದೆ.

ದುಷ್ಟ ನಾಯಿಗಳನ್ನು ಛೂ ಬಿಡುವೆ...

ಪ್ರತಿಭಟನೆಯಿಂದ ಕಂಗೆಟ್ಟಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸಿರುವ ಭಾಷೆ ಹೋರಾಟಗಾರರನ್ನು ರೊಚ್ಚಿಗೆಬ್ಬಿಸಿದೆ. ‘ನಿಮ್ಮ ವಿರುದ್ಧ ದುಷ್ಟನಾಯಿಗಳನ್ನು ಛೂ ಬಿಡಲೇ ಅಥವಾ ಅತಿಭಯಂಕರ ಆಯುಧ ಬಳಸಲು ಆದೇಶಿಸಲೇ’ ಎಂದು ಟ್ರಂಪ್ ಸರಣಿ ಟ್ವೀಟ್​ಗಳಲ್ಲಿ ಕೇಳಿದ್ದಾರೆ.

ಖಾಕಿ ದೌರ್ಜನ್ಯ ಕಾರಣ

ನಕಲಿ ಬಿಲ್ ನೀಡಿ ಅಂಗಡಿಯಲ್ಲಿ ಖರೀದಿ ನಡೆಸಿದ್ದಾರೆಂಬ ಆರೋಪದ ಮೇಲೆ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್್ಡ (46) ಎಂಬುವರನ್ನು ಪೊಲೀಸರು ಕಳೆದ ಸೋಮವಾರ ಬಂದಿಸಿದ್ದರು. ಈ ಸಮಯದಲ್ಲಿ ಪೊಲೀಸ್ ಅಧಿಕಾರಿ ಫ್ಲಾಯ್್ಡ ಕುತ್ತಿಗೆ ಮೇಲೆ ಮೊಣಕಾಲಿಟ್ಟು ಒತ್ತಿ ಹಿಡಿದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದ ಇದನ್ನು ಖಂಡಿಸಿ ಮಿನ್ನಿಯಾದಲ್ಲಿ 5 ದಿನದ ಹಿಂದೆ ಆರಂಭವಾದ ಪ್ರತಿಭಟನೆ ವಿವಿಧ ನಗರಗಳಿಗೆ ವಿಸ್ತರಣೆಯಾಗಿದೆ. ಆರೋಪಿ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂಬುದು ಪ್ರತಿಭಟನಾಕಾರರ ಆಗ್ರಹ.

ಶ್ವೇತಭವನಕ್ಕೆ ಮುತ್ತಿಗೆ

ನ್ಯೂಯಾರ್ಕ್ ಸಿಟಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ವಾಹನ ನುಗ್ಗಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಫಿಲಿಡಲ್ಪಿಯಾದಲ್ಲಿ ಪೆಪ್ಪರ್ ಸ್ಪ್ರೇ ಮಾಡಲಾಗಿದ್ದು, ಹೋರಾಟಗಾರರು ಅಂಗಡಿಗಳ ಗಾಜು ಒಡೆದಿದ್ದಾರೆ. ರಾಜಧಾನಿ ವಾಷಿಂಗ್ಟನ್​ನಲ್ಲೂ ಪ್ರತಿಭಟನೆ ವ್ಯಕ್ತವಾಗಿದೆ. ಶ್ವೇತಭವನ ಮುಂದೆ ಎರಡನೇ ದಿನವೂ ರಾತ್ರಿಯೂ ಹರತಾಳ ನಡೆದಿದ್ದು, ಮುತ್ತಿಗೆ ಹಾಕಲಾಗಿದೆ. ಡೆಟ್ರಾಯ್್ಟಲ್ಲಿ ಪ್ರತಿಭಟನಾಕಾರರು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆ ಶುಕ್ರವಾರ ನಡೆದಿದೆ.