ನವದೆಹಲಿ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಯೆಸ್ ಬ್ಯಾಂಕ್ ಮೇಲೆ ಹೇರಿದ್ದ ತಾತ್ಕಾಲಿಕ ನಿಷೇಧವನ್ನು ಮಾರ್ಚ್ 18ರಂದು ಸಂಜೆ 6ಗಂಟೆಗೆ ಹಿಂಪಡೆಯಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ(ಮಾರ್ಚ್ 18) ಸಂಜೆ ಬ್ಯಾಂಕ್ನ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಳ್ಳಲಿದೆ. ಯೆಸ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟವರು ನಗದು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಅವಸರ ಮಾಡಬಾರದು. ಠೇವಣಿದಾರರು ಆತಂಕದಿಂದ ಬಂದು ಹಣ ಹಿಂತೆಗೆತಕ್ಕೆ ಅವಸರ ಮಾಡಿದರೆ, ಬ್ಯಾಂಕ್ನ್ನು ಪುನಶ್ಚೇತನಗೊಳಿಸಲು ನಾವು ತೆಗೆದುಕೊಂಡ ಕ್ರಮ ಹಳಿ ತಪ್ಪುತ್ತದೆ ಎಂದು ಹೇಳಿದರು.
ಯೆಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಬ್ಯಾಂಕ್ನ ಆರ್ಥಿಕ ಸುಧಾರಣೆಗೆ ಆರ್ಬಿಐ ಎಲ್ಲ ರೀತಿಯ ಬೆಂಬಲವನ್ನೂ ನೀಡಲಿದೆ. ಗ್ರಾಹಕರು ಯಾರೂ ತಮ್ಮ ಹಣದ ವಿಚಾರದಲ್ಲಿ ಭಯ ಪಡುವುದು ಬೇಡ ಎಂದರು.
ಸುಸ್ತಿ ಸಾಲಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ನ್ನು ಮಾರ್ಚ್ 5ರಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಬ್ಯಾಂಕ್ನ ಆಡಳಿತ ಮಂಡಳಿಯನ್ನು ಸೂಪರ್ಸೀಡ್ ಮಾಡಿತ್ತು.
ಹಾಗೇ ಗ್ರಾಹಕರ ಹಣ ವಿತ್ಡ್ರಾ ಮಿತಿಯನ್ನು 50 ಸಾವಿರ ರೂಪಾಯಿಗೆ ಮಿತಿಗೊಳಿಸಿತ್ತು. (ಏಜೆನ್ಸೀಸ್)