ನ್ಯೂಸ್

ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಪಾಠ ಚಿಂತನೆ: ಮಧು ಬಂಗಾರಪ್ಪ|Moral Lesson

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ಪಾಠಕ್ಕೆ ಅವಕಾಶ ಮಾಡಿಕೊಡುವ ಕುರಿತು ಗಮನಹರಿಸುವುದಾಗಿ(Moral lesson thinking in primary education) ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ( Madhu Bangarappa) ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾರತಿ ಶೆಟ್ಟಿ ವಿಷಯ ಪ್ರಸ್ತಾಪಿಸಿ ಹದಿಹರೆಯದ ಮಕ್ಕಳ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

14 ರಿಂದ 17ನೇ ವಯಸ್ಸಿನ ಮಕ್ಕಳ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಈ ವಯಸ್ಸಿನ ಮಕ್ಕಳ ಮೇಲೆ ಸೂಕ್ಷ್ಮ ನಿಗಾ ಇರಿಸಬೇಕು. ಶಾಲೆಯಲ್ಲಿ ಪಾಠದ ಒತ್ತಡ, ಮನೆಯಲ್ಲಿ ಮೊಬೈಲ್‌ನಲ್ಲಿ ಆಟ ಎಂಬಂತಾಗಿ ಹದಿಹರೆಯದ ಮಕ್ಕಳು ದೈಹಿಕ ಮತ್ತು ಬೌದ್ಧಿಕವಾಗಿ ದುರ್ಬಲರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಅನೇಕ ಮಕ್ಕಳ ದಾರಿ ತಪ್ಪುತ್ತಿದ್ದಾರೆ ಎಂದರು.

ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ಬಾಂಬೆ ರೆಡ್ ಲೈಟ್ ಏರಿಯಾದಲ್ಲಿನ ಶೇ.99 ರಷ್ಟು ಮಹಿಳೆಯರು ಅಪ್ರಾಪ್ತ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಹೋದವರಾಗಿದ್ದಾರೆ. ಇಂದಿನ ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ, ನೈತಿಕ ಶಿಕ್ಷಣ ಸಿಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಭಾರತಿ ಶೆಟ್ಟಿ ಹೇಳಿದರು.

ನೈತಿಕ ಶಿಕ್ಷಣ ನೀಡಿ ಸಭಾಪತಿ ಸಲಹೆ

ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, 8 ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆ ಒಂದು ಗಂಟೆ ನೈತಿಕ ಶಿಕ್ಷಣ ನೀಡಬೇಕು. ಅದಕ್ಕೇ ಒಬ್ಬರೇ ಶಿಕ್ಷಕರು ಆಗಬೇಕೆಂದೇನೂ ಇಲ್ಲ. ಎಲ್ಲ ಶಿಕ್ಷಕರೂ ವಾರಕ್ಕೆ ಒಂದು ಬಾರಿ ನೈತಿಕ ಪಾಠ ಮಾಡಿದರೆ ಸಾಕು ಎಂದು ಶಾಲಾ ಶಿಕ್ಷಣ ಸಚಿವರಿಗೆ ಸಲಹೆ ನೀಡಿದರು.

ಆಪ್ತ ಸಮಾಲೋಚಕರನ್ನು ನೇಮಿಸಿ

ಆಗ ಕಾಂಗ್ರೆಸ್‌ನ ಐವನ್ ಡಿಸೋಜ ಮಾತನಾಡಿ, ಶಾಲಾ ಹಂತದಲ್ಲಿ ಮಕ್ಕಳಿಗೆ ಆಪ್ತ ಸಮಾಲೋಚನಾ ವ್ಯವಸ್ಥೆ ಮಾಡಬೇಕೆಂಬ ಪ್ರಸ್ತಾಪವನ್ನು ನಾವು ಬಹಳ ಹಿಂದೆಯೇ ಮಾಡಿದ್ದೆವು. ಆ ಕೆಲಸ ಇನ್ನೂ ಆಗಿಲ್ಲ ಎಂದು ಬೇಸರ ಹೊರ ಹಾಕಿದರು.

ಡಾ.ತಿಮ್ಮಯ್ಯ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಪ್ರಭಾವ ನಗರ ಪ್ರದೇಶದ ಹದಿಹರೆಯದವರ ಮೇಲೆ ಪ್ರಭಾವ ಬೀರಿದರೆ, ಗ್ರಾಮೀಣ ಪ್ರದೇಶದಲ್ಲಿ ಬಡತನ, ಅನಕ್ಷರತೆ, ಅಲೆಮಾರಿ, ನಿರಾಶ್ರಿತರ ಮಕ್ಕಳ ಬದುಕು ಬರ್ಭರವಾಗಿದೆ. 3 ವರ್ಷದಲ್ಲಿ 33,621 ಬಾಲ್ಯವಿವಾಹವಾದ ವರದಿ ಇದೆ. ಅದೂ ಬೆಂಗಳೂರಿನಲ್ಲೇ ಹೆಚ್ಚು ಬಾಲ್ಯವಿವಾಹ ಪ್ರಕರಣ ಬೆಳಕಿಗೆ ಬಂದಿವೆ. 49 ಸಾವಿರ ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ದಾಖಲೆಯಾಗದ ಇನ್ನೆಷ್ಟೋ ಪ್ರಕರಣಗಳು ನಡೆದಿರುತ್ತವೆ. ಭಾರತದಲ್ಲೇ ಹೆಚ್ಚು ಬಾಲ ಕಾರ್ಮಿಕರಿದ್ದಾರೆ. ಇದೆಲ್ಲವನ್ನೂ ಗಂಭೀರವಾಗಿ ಚಿಂತನೆ ನಡೆಸಿ ಪರಿಹಾರೋಪಾಯ ಕಂಡು ಹಿಡಿಯುವ ಕೆಲಸವಾಗಬೇಕು ಎಂದು ಡಾ.ತಿಮ್ಮಯ್ಯ ಗಮನ ಸೆಳೆದರು.