ಶಿವಮೊಗ್ಗ: ನಾಲ್ಕು ಗೋಡೆಗಳ ನಡುವಿನ ಶಿಕ್ಷಣದ ಜತೆಗೆ ಹೃದಯವಂತಿಕೆಯನ್ನು ಕಲಿಸುವ ನೈತಿಕ ಶಿಕ್ಷಣವನ್ನು ಕಲಿಸಬೇಕಿದೆ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಶನಿವಾರ ವೈಶಾಖ ವೈಭವ ಕಾರ್ಯಕ್ರಮದಲ್ಲಿ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಜವಾಬ್ದಾರಿಯುತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಒಳ್ಳೆಯ ಶಿಕ್ಷಣ ಬೇಕು ನಿಜ. ಆದರೆ ಶಿಕ್ಷಣ ಕಲಿತ ಕೂಡಲೆ ಉತ್ತಮ ನಾಗರಿಕರಾಗುವುದಿಲ್ಲ. ನಮ್ಮ ನಿಜವಾದ ಬದುಕು ರೂಪಿಸುವುದು ಸಮಾಜದಿಂದ ಪಡೆದ ಅನುಭವವೆಂಬ ಶಿಕ್ಷಣ. ಅಂತಹ ವ್ಯಕ್ತಿತ್ವದ ಪರಿಪೂರ್ಣತೆಗೆ ಕಾಲೇಜು ಹಂತದಲ್ಲಿ ಲಭ್ಯವಿರುವ ವೇದಿಕೆಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಏಳನೇ ತರಗತಿಯೇ ಕೊನೆ ಎಂಬ ಮನಸ್ಥಿತಿ ಇತ್ತು. ಬದಲಾದ ಕಾಲಮಾನದಲ್ಲಿ ಸಮಾಜದ ಮುಖ್ಯ ವಾಹಿನಿಯಲ್ಲಿ ಇಂದು ಹೆಣ್ಣು ಮಕ್ಕಳು ಅದ್ಭುತ ಸಾಧಕರಾಗಿ ಹೊರಹೊಮ್ಮುತ್ತಿದ್ದಾರೆ. ವಿಭಿನ್ನವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ದೇಶವನ್ನು ಉದ್ದೇಶಿಸಿ ಯುದ್ದದ ಕುರಿತಾಗಿ ಇಬ್ಬರು ಮಹಿಳಾ ಕಮಾಂಡರ್ ಮಾಡಿದ ಸುದ್ದಿಗೋಷ್ಠಿಯೇ ಅದ್ಭುತ ಉದಾಹರಣೆ. ಅಂತಹ ದಿಟ್ಟತನವನ್ನು ನಾವೆಲ್ಲರೂ ಅಭಿನಂದಿಸಬೇಕಿದೆ ಎಂದರು.
ಪ್ರಾಚಾರ್ಯ ಡಾ. ಆರ್.ಎಂ.ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜನಾಧಿಕಾರಿ ಡಾ. ಎ.ಪಿ.ಓಂಕಾರಪ್ಪ, ಸಾಂಸ್ಕೃತಿಕ ಸಂಘದ ಸಂಚಾಲಕಿ ಡಿ.ಎಂ.ಕಾವ್ಯಶ್ರೀ ಉಪಸ್ಥಿತರಿದ್ದರು.