ಬೆಂಗಳೂರು: ವೈದ್ಯಕಿಯ ಪದವಿ ಕೋರ್ಸುಗಳಿಗೆ ಈಗಾಗಲೇ ಸೀಟು ಪಡೆದುಕೊಂಡಿರುವ ಅಭ್ಯರ್ಥಿಗಳು ಕೂಡ ಮಾಪ್ ಅಪ್ ಸುತ್ತಿನಲ್ಲಿ ಪಾಲ್ಗೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಗುರುವಾರ ತಿಳಿಸಿದ್ದಾರೆ.
ಈಗಾಗಲೇ ನಡೆದಿರುವ ಎರಡು ಸುತ್ತಿನ ಸೀಟು ಹಂಚಿಕೆಯ ನಂತರ ಶುಲ್ಕ ಪಾವತಿಸದೆ ಇರುವ ಕಾರಣಕ್ಕಾಗಿ ಜಿ(ಸರ್ಕಾರಿ) ಕೋಟಾದಲ್ಲಿ 42 ಮತ್ತು ಪಿ(ಖಾಸಗಿ) ಕೋಟಾದಲ್ಲಿ 482 ಸೀಟುಗಳು ಖಾಲಿ ಉಳಿದಿರುವ ಈ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರವೇಶ ಪ್ರಕ್ರಿಯೆ ಮುಗಿಸಿರುವವರು ಮತ್ತು ಸೀಟು ಹಂಚಿಕೆಯಾಗಿದ್ದರೂ ಇದುವರೆಗೂ ಶುಲ್ಕ ಪಾವತಿಸದೆ ಪ್ರವೇಶ ಪ್ರಕ್ರಿಯೆ ಮುಗಿಸದೆ ಇರುವವರು ಕೂಡ ಮಾಪ್ ಅಪ್ ಸುತ್ತಿನಲ್ಲಿ ಈ ಸೀಟುಗಳಿಗೆ ಭಾಗವಹಿಸಬಹುದು. ಆ ಮೂಲಕ ಇಚ್ಛೆ ಪಟ್ಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅನುಕೂಲ ಮಾಡಲಾಗಿದೆ.
ಮಾಪ್ಅಪ್ ಸುತ್ತಿನಲ್ಲಿ ಪಾಲ್ಗೊಳ್ಳಬಯಸುವ ಅಭ್ಯರ್ಥಿಗಳು ಒಂದು ಲಕ್ಷ ರೂ.ಗಳ ಮುಂಜಾಗ್ರತಾ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಜತೆಗೆ ಹೊಸದಾಗಿ ಆಯ್ಕೆ ದಾಖಲಿಸಬೇಕು. ಮಾಪ್ಅಪ್ ಸುತ್ತಿನಲ್ಲಿ ಯಾವ ಕಾಲೇಜಿನಲ್ಲಿ ಸೀಟು ಸಿಗುತ್ತದೋ ಅಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಅಂದರೆ, ಹಿಂದೆ ಹಂಚಿಕೆಯಾಗಿದ್ದ ಸೀಟು ರದ್ದುಗೊಳ್ಳುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.