ಮೈಸೂರು: ಸಂಗೀತ ರಸಿಕರ ಮೆಚ್ಚುಗೆ ಗಳಿಸಿರುವ ಪಂ.ಸಿದ್ರಾಮಪ್ಪ ಪೊಲೀಸ್ ಪಾಟೀಲ್ ಅವರು ಅ.17 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-272 ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಗೀತ ಕಾರ್ಯಕ್ರಮ ನೀಡವ ಇವರಿಗೆ ಪಂ.ವೀರಭದ್ರಯ್ಯ ಎಸ್.ಹಿರೇಮಠ(ಹಾರ್ಮೋನಿಯಂ), ಪಂ.ರಮೇಶ ಪಿ.ಧನ್ನೂರ್(ತಬಲ) ಸಾಥ್ ನೀಡಲಿದ್ದಾರೆ.
ಪಂ. ಸಿದ್ರಾಮಪ್ಪ ಪೊಲೀಸ್ ಪಾಟೀಲ್ ಅವರು ಕಲಬುರಗಿ ಜಿಲ್ಲೆಯ ಕುಕನೂರಿನವರು. ಹಿಂದುಸ್ತಾನಿ ಮತ್ತು ಸುಗಮ ಸಂಗೀತಗಳಲ್ಲಿ ನಿಷ್ಣಾತರು, ದೃಷ್ಟಿದೋಷದ ಅಡೆತಡೆಗಳ ನಡುವೆಯೂ ಅನನ್ಯ ಸಾಧನೆ ಮಾಡಿರುವ ಸಂಗೀತ ಕ್ಷೇತ್ರದ ಅಭಿಜಾತ ಕಲಾವಿದರು. ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ.ಡಾ.ಪುಟ್ಟರಾಜ ಗವಾಯಿಗಳ ಬಳಿ ಗುರುಕುಲ ಪದ್ಧತಿಯಲ್ಲಿ ಸಂಗೀತವನ್ನು ಕಲಿತವರು. ಸಂಗೀತದಲ್ಲಿ ವಿದ್ವತ್, ವಿಶಾರದ ಹಾಗೂ ಅಲಂಕಾರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಆಕಾಶವಾಣಿಯಲ್ಲಿ ಹಿಂದುಸ್ತಾನಿ ಗಾಯನ ಮತ್ತು ಹಾರ್ಮೋನಿಯಂ ವಾದನದಲ್ಲಿ ಬಿ ಶ್ರೇಣಿ, ಸುಗಮ ಸಂಗೀತದಲ್ಲಿ ಬಿ-ಹೈ ಶ್ರೇಣಿ ಮತ್ತು ತತ್ವಪದ ಗಾಯನದಲ್ಲಿ ಎ ಶ್ರೇಣಿ ಗಳಿಸಿರುವ ಪ್ರತಿಭಾವಂತರು.