Indian Economy: ಜಾಗತಿಕ ರೇಟಿಂಗ್ ಸಂಸ್ಥೆ 'ಮೂಡೀಸ್' ಭಾರತದ ಜಿಡಿಪಿ ಶೇ. 7 ರಷ್ಟು ಬೆಳೆಯಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ಶುರುವಾಗಿದೆ. ಭಾರತದ ಗಟ್ಟಿಮುಟ್ಟಾದ ಆರ್ಥಿಕತೆ ಮತ್ತು ಇಂಧನ ಬಿಕ್ಕಟ್ಟು ಎದುರಿಸಿದ ಹಾದಿಯನ್ನು ಮೂಡೀಸ್ ಮೆಚ್ಚಿಕೊಂಡಿದ್ದರೆ, ಜಾಲತಾಣಗಳಲ್ಲಿ ಇದರ ಪರ-ವಿರೋಧದ ಬಗ್ಗೆ ನೆಟ್ಟಿಗರು ಕಮೆಂಟ್ ಸಮರ ನಡೆಸುತ್ತಿದ್ದಾರೆ.
ತನ್ನ ಪ್ರಸಿದ್ಧ 'ಗ್ಲೋಬಲ್ ಮ್ಯಾಕ್ರೋ ಔಟ್ಲುಕ್ 2027-28' ವರದಿಯಲ್ಲಿ, ಮೂಡೀಸ್ ರೇಟಿಂಗ್ಸ್ ಸಂಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇ. 6.5 ರಿಂದ ಶೇ. 7 ಕ್ಕೆ ಪರಿಷ್ಕರಿಸಿ ಹೆಚ್ಚಿಸಿದೆ.
ಇಂಧನ ಶಾರ್ಟೇಜ್ ನಿರ್ವಹಣೆ: ಜಾಗತಿಕವಾಗಿ ಇಂಧನ ಬೆಲೆ ಏರಿಕೆಯಾಗಿದ್ದರೂ, ಭಾರತವು ಇತರ ದೇಶಗಳಿಂದ ಕಚ್ಚಾ ತೈಲ ಪಡೆದು ಬೆಲೆ ಏರಿಕೆಯ ಬಿಸಿಯನ್ನು ನಿಯಂತ್ರಿಸಿತು.
ವಿಶ್ವದ ದೊಡ್ಡ ಸಂಸ್ಕರಣಾಗಾರ: ಪ್ರಪಂಚದ ಅತಿ ದೊಡ್ಡ ಏಕ-ತಾಣದ ತೈಲ ಸಂಸ್ಕರಣಾಗಾರವನ್ನು ಹೊಂದಿರುವುದರಿಂದ, ಭಾರತವು ಇಂಧನ ಕೊರತೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ವಿದೇಶಗಳಿಗೆ ಪೆಟ್ರೋಲಿಯಂ ರಫ್ತು ಮಾಡುವುದನ್ನೂ ಮುಂದುವರಿಸಿದೆ.
ಖಾಸಗಿ ವಲಯದ ಹೂಡಿಕೆ ಹಾಗೂ ಜಿಎಸ್ಟಿ ಸಂಗ್ರಹ: ಕೈಗಾರಿಕಾ ಸಾಲಗಳ ಬೆಳವಣಿಗೆ, ವಾಹನ ಮಾರಾಟ, ಜಿಎಸ್ಟಿ ಆದಾಯದಲ್ಲಿನ ಎರಡಂಕಿ ಶೇಕಡಾವಾರು ಏರಿಕೆ ಮತ್ತು ಸರಕುಗಳ ರಫ್ತು ಹೆಚ್ಚಿರುವುದು ಆರ್ಥಿಕ ಚೇತರಿಕೆಗೆ ಪುಷ್ಟಿ ನೀಡಿದೆ.
ಮೂಡೀಸ್ ವರದಿಯ ಪ್ರಕಾರ, ಪ್ರಸ್ತುತ ಹಣಕಾಸು ವರ್ಷದಲ್ಲಿ ಕೆಲವು ಸವಾಲುಗಳೂ ಇವೆ
ಹಣದುಬ್ಬರ ಮತ್ತು ಬೆಲೆ ಏರಿಕೆ: ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆಯು ಜನರ ಖರ್ಚು ಮಾಡುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು. ಪ್ರಸ್ತುತ ಹಣದುಬ್ಬರವು ಆರ್ಬಿಐನ ಶೇ. 2 ರಿಂದ 6 ರವರೆಗಿನ ಗುರಿಯ ಮೇಲ್ಮಟ್ಟದಲ್ಲಿದೆ.
ಮಳೆ ಕೊರತೆ: ಮುಂಗಾರು ಮಳೆಯ ಕೊರತೆ ಮತ್ತು 'ಎಲ್ ನಿನೋ' ಪ್ರಭಾವದಿಂದಾಗಿ ಕೃಷಿ ಇಳುವರಿ ಹಾಗೂ ಗ್ರಾಮೀಣ ಭಾಗದ ಬೇಡಿಕೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಆರ್ಬಿಐ ಬಡ್ಡಿದರ ಏರಿಕೆ: ಆರ್ಬಿಐ ಇನ್ನಷ್ಟು ಬಡ್ಡಿದರ ಏರಿಕೆ ಮಾಡಿದರೆ, ಅದು ಖಾಸಗಿ ಕಂಪನಿಗಳ ಹೊಸ ಹೂಡಿಕೆಯನ್ನು ಸ್ವಲ್ಪ ತಡೆಹಿಡಿಯಬಹುದು.
ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿ ಸುಧಾರಿಸಿದರೆ ಮುಂಬರುವ ದಿನಗಳಲ್ಲಿ ಭಾರತೀಯ ಅರ್ಥವ್ಯವಸ್ಥೆ ಶೇ. 7 ರಷ್ಟು ದರದಲ್ಲಿ ಮುನ್ನುಗ್ಗಲಿದೆ ಎಂಬುದು ಮೂಡೀಸ್ ಲೆಕ್ಕಾಚಾರ. ಆದರೆ, ದೇಶದಲ್ಲಿನ್ನೂ ಕಾಡುತ್ತಿರುವ ನಿರುದ್ಯೋಗ, ಬಡತನ ಮತ್ತು ಮೂಲಸೌಕರ್ಯಗಳ ಕೊರತೆಯ ನಡುವೆ ಈ ವರದಿ ಎಷ್ಟು ಪ್ರಾಯೋಗಿಕ ಎಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.(ಏಜೆನ್ಸೀಸ್)