ನ್ಯೂಸ್

ಮೂಡುಶೆಡ್ಡೆಯಲ್ಲಿ ವಿದ್ಯುತ್ ಆಘಾತಕ್ಕೆ ಕಾರ್ಮಿಕ ಬಲಿ


ಮಂಗಳೂರು: ಮೂಡುಶೆಡ್ಡೆಯಲ್ಲಿ ವಿದ್ಯುತ್ ಆಘಾತಕ್ಕೆ ಸಿಲುಕಿ ಶಾಮಿಯಾನ ಅಂಗಡಿಯ ಕಾರ್ಮಿಕರೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.


ಮಧ್ಯಪ್ರದೇಶದ ಸೋನುಸಿಂಗ್ ಗೋಂಡಾ(22) ಮೃತಪಟ್ಟ ಕಾರ್ಮಿಕ. ಮೂಡುಶೆಡ್ಡೆ ಗ್ರಾ.ಪಂ. ಕಚೇರಿ ಬಳಿ ಇರುವ ಶಾಮಿಯಾನ ಅಂಗಡಿಯಲ್ಲಿ ಕಳೆದ 5 ತಿಂಗಳಿನಿಂದ ಸೋನುಸಿಂಗ್ ಕೆಲಸ ಮಾಡಿಕೊಂಡಿದ್ದರು. ಅಂಗಡಿಯ ಕೊಠಡಿಯಲ್ಲಿಯೇ ಉಳಿದುಕೊಂಡಿದ್ದರು. ಮಂಗಳವಾರ ರಾತ್ರಿ 7 ಗಂಟೆಗೆ ಶಾಮಿಯಾನ ಅಂಗಡಿಗೆ ಬಂದು ರಾತ್ರಿ 7.45ರ ಸುಮಾರಿಗೆ ಊಟ ಸಿದ್ಧಪಡಿಸಲೆಂದು ಅಂಗಡಿಯ ಸಿಮೆಂಟ್ ಶೀಟ್‌ಗೆ ಅಳವಡಿಸಿದ್ದ ಕಬ್ಬಿಣದ ಪಕ್ಕಾಸಿನ ಕಬ್ಬಿಣದ ರಾಡ್‌ನಲ್ಲಿದ್ದ ನೀರುಳ್ಳಿ ತೊಟ್ಟೆ ತೆಗೆಯಲು ಕಬ್ಬಿಣದ ರಾಡ್ ಮುಟ್ಟಿದಾಗ ವಿದ್ಯುತ್ ಶಾಕ್ ತಗಲಿತು. ಅಲ್ಲೇ ಇದ್ದ ಇನ್ನೋರ್ವ ಕಾರ್ಮಿಕ ಕೂಡಲೇ ಪ್ಲಾಸ್ಟಿಕ್ ಟೇಬಲ್‌ನ ಕಾಲಿನಿಂದ ಸೋನುಸಿಂಗ್‌ನನ್ನು ದೂಡಿ ಕೆಳಗೆ ಬೀಳುವಂತೆ ಮಾಡಿದರು. ಆ ವೇಳೆಗೆ ಸೋನು ಸಿಂಗ್‌ನ ಯಾವುದೇ ಚಲನೆ ಇರಲಿಲ್ಲ. ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಷ್ಟರಲ್ಲಿ ಸೋನುಸಿಂಗ್ ಮೃತಪಟ್ಟಿದ್ದಾರೆ.

ಶಾಮಿಯಾನ ಅಂಗಡಿ ಮಾಲೀಕ ಅಸಮರ್ಪಕವಾಗಿ ವಿದ್ಯುತ್ ಸಂಪರ್ಕ ಅಳವಡಿಸಿರುವುದರಿಂದ ವಿದ್ಯುತ್ ಶಾಕ್ ತಗಲಿದೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.