ಎನ್.ಆರ್.ಪುರ: ಎನ್.ಆರ್.ಎಲ್.ಎಂ. ಯೋಜನೆಯಡಿ ಸಂಜೀವಿನಿ ಮಾಸಿಕ ಸಂತೆಯನ್ನು ಆಯೋಜಿಸಿ ಆ ಮೂಲಕ ಸಂಘದ ಸದಸ್ಯರುಗಳೇ ಉತ್ಪಾದಿಸಿದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಚಿಕ್ಕಮಗಳೂರು ಜಿಪಂ ಯೋಜನಾ ನಿರ್ದೇಶಕಿ ಎಸ್.ನಯನಾ ಹೇಳಿದರು.
ಅವರು ಮಂಗಳವಾರ ಮುತ್ತಿನಕೊಪ್ಪದಲ್ಲಿ ಎನ್.ಆರ್.ಎಲ್.ಎಂ. ಯೋಜನೆ ಅಡಿ ಆಯೋಜಿಸಿದ್ದ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿ, ಇದರಿಂದ ಸದಸ್ಯರು ಆರ್ಥಿಕ ಸಬಲರಾಗಲು ಉತ್ತಮ ಅವಕಾಶ ಕಲ್ಪಿಸಿದಂತಾಗಿದೆ ಎಂದರು.
ಎ್.ಎಸ್.ಎಸ್.ಎ.ಐ ಬ್ರಾಂಡಿಂಗ್ ಇರುವಂತಹ ಉತ್ಪನ್ನಗಳು ದೊರಕುವಂತಾಗಬೇಕು. ಈಗಾಗಲೇ ಚಿಕ್ಕಮಗಳೂರಿನಲ್ಲಿ ಅಸ್ಮಿತೆ ಮಾರ್ಟ್ ಪ್ರಾರಂಭಿಸಿದ್ದು ಇಲ್ಲಿ ಸ್ವ ಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲಾಗುವುದು ಎಂದರು.
ಈಗಾಗಲೇ ಮುತ್ತಿನಕೊಪ್ಪದಲ್ಲಿ ಎರಡು ಮಾಸಿಕ ಸಂತೆಗಳಾಗಿದ್ದು ಇದು ಮೂರನೇ ಸಂತೆಯಾಗಿದೆ. ಈ ಸಂತೆ ಸ್ವ ಸಹಾಯ ಸಂಘದ ಸದಸ್ಯರಿಗೆ ವರದಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇಖಾ ಮಾತನಾಡಿ, ಸರ್ಕಾರದಿಂದ ಎನ್.ಆರ್.ಎಲ್.ಎಂ ಯೋಜನೆಯಡಿ ಸಿಗುವಂತಹ ಎಲ್ಲಾ ಸವಲತ್ತುಗಳನ್ನು ಸದಸ್ಯರುಗಳು ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ಸದಸ್ಯರುಗಳೂ ಕೂಡ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಮೊಹಮ್ಮದ್ ಯಾಜ್, ಪ್ರವೀಣ್, ಲಿಸ್ಸಿಸೆಬಾಸ್ಟಿನ್, ಪುಷ್ಪಾ, ಒಕ್ಕೂಟದ ಖಜಾಂಚಿ ಮಮತಾ, ಪಶು ಸಖಿಯರು, ಕೃಷಿ ಸಖಿಯರು, ಎನ್.ಆರ್.ಎಲ್.ಎಂ ಯೋಜನೆಯ ಸಿಬ್ಬಂದಿ ಕಿಶೋರ್, ಚೇತನ್, ಶ್ವೇತಾ, ಎನ್.ವಿ.ಶೈನಿ ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.