ನ್ಯೂಸ್

ರಾಜ್ಯಕ್ಕೆ ಮುಂಗಾರು ಆಗಮನ; ನಾಳೆ ಕರಾವಳಿಯಲ್ಲಿ ರೆಡ್​ ಅರ್ಲಟ್​

ಬೆಂಗಳೂರು : ವಾಡಿಕೆಯಂತೆ ಶುಕ್ರವಾರ(ಜೂನ್ 4) ನೈರುತ್ಯ ಮುಂಗಾರು ಮಾರುತಗಳು ರಾಜ್ಯಕ್ಕೆ ಪ್ರವೇಶಿಸಿವೆ. ಗುರುವಾರ ಕೇರಳಕ್ಕೆ ಆಗಮಿಸಿದ್ದ ಮಾರುತಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಕಾಲಿಟ್ಟಿವೆ. ಬೆಂಗಳೂರು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇಂದು ಭಾರೀ ವರ್ಷಧಾರೆಯಾಗಿದೆ.

ಕಳೆದ ವರ್ಷ ಜೂ.6 ರಂದು ರಾಜ್ಯವನ್ನು ಮುಂಗಾರು ಪ್ರವೇಶಿಸಿತ್ತು. ಅದಕ್ಕೂ ಹಿಂದಿನ ವರ್ಷದಲ್ಲಿ ಮೇ ಕೊನೆಯ ದಿನದಲ್ಲಿ ಆಗಮಿಸಿತ್ತು. ರಾಜಾದ್ಯಂತ ಮಾರುತಗಳು ವ್ಯಾಪಿಸಲು ಮೂರ್ನಾಲ್ಕು ದಿನಗಳು ಬೇಕಾಗಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರೆಡ್​ ಅರ್ಲಟ್​: ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಜೂ.5 ರಂದು ಅತಿ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ರೆಡ್​ ಅರ್ಲಟ್​ ಘೋಷಿಸಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಆರೆಂಜ್​ ಅರ್ಲಟ್​ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ. ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್​, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ ಮತ್ತು ವಿಜಯಪುರದಲ್ಲಿ ಜೂ.5 ರಂದು ಯೆಲ್ಲೋ ಅರ್ಲಟ್​ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.