ನ್ಯೂಸ್

ಮುಂಗಾರು ಮಳೆ ಪ್ರವೇಶಕ್ಕೆ ಕ್ಷಣಗಣನೆ..ಮುಂದಿನ 24 ಗಂಟೆಗಳಲ್ಲಿ ಈ ಭಾಗದಲ್ಲಿ ಧಾರಾಕಾರ ಮಳೆ!

ಬೆಂಗಳೂರು: ಮುಂಗಾರು ಮಳೆ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮಾರುತಗಳು ಆಗಮಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 24-ಗಂಟೆಗಳಲ್ಲಿ ಕೇರಳವನ್ನು ಮಾನ್ಸೂನ್ ಪ್ರವೇಶಿಸಲಿಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾನ್ಸೂನ್ ಪ್ರವೇಶಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿ ಮುಂದುವರಿಯುತ್ತವೆ ಎಂದು ಐಎಂಡಿ(ಭಾರತೀಯ ಹವಾಮಾನ ಇಲಾಖೆ) ಹೇಳಿದೆ

ಅದೇ ಅವಧಿಯಲ್ಲಿ ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್, ಲಕ್ಷದ್ವೀಪ, ನೈಋತ್ಯ ಮತ್ತು ಮಧ್ಯ ಬಂಗಾಳ ಕೊಲ್ಲಿ, ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಪ್ರಗತಿಗೆ ಪರಿಸ್ಥಿತಿಗಳು ಅನುಕೂಲಕರವಾಗಿ ಮುಂದುವರಿಯುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸ್ಕೈಮೆಟ್ ಹವಾಮಾನ ವರದಿ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಬಾಂಗ್ಲಾದೇಶ ಮತ್ತು ಈಶಾನ್ಯ ಭಾರತದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕೇರಳ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಕೊಂಕಣ ಮತ್ತು ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಒಡಿಶಾದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಗುಜರಾತ್ ಮತ್ತು ರಾಜಸ್ಥಾನದ ಗರಿಷ್ಠ ತಾಪಮಾನ ಮತ್ತಷ್ಟು ಕುಸಿಯಬಹುದು. ಹವಾಮಾನ ಇಲಾಖೆ ಪ್ರಕಾರ ಜೂನ್​ 1ಕ್ಕೆ ಮಾನ್ಸೂನ್ ಕೇರಳಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಇನ್ನು ರೆಮಲ್ ಚಂಡಮಾರುತ ಕರಾವಳಿ ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಮೇಲೆ ಕಳೆದ 6 ಗಂಟೆಗಳಲ್ಲಿ ಗಂಟೆಗೆ 15 ಕಿಮೀ ವೇಗದಲ್ಲಿ ಬಹುತೇಕ ಉತ್ತರದ ಕಡೆಗೆ ಚಲಿಸಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಕ್ರಮೇಣವಾಗಿ ದುರ್ಬಲಗೊಂಡು ಮರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂನ್ 15 ರೊಳಗೆ ಮುಂಗಾರು ಬಿಹಾರವನ್ನು ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೇ, ಜೂನ್ 15 ರಿಂದ 20 ರವರೆಗೆ ಮಧ್ಯಪ್ರದೇಶ, ಜೂನ್ 25 ರಿಂದ ಜೂನ್ 30 ರವರೆಗೆ ರಾಜಸ್ಥಾನ, ಜೂನ್ 10 ರೊಳಗೆ ಮಹಾರಾಷ್ಟ್ರ ಮತ್ತು ಜೂನ್ 15 ರೊಳಗೆ ಛತ್ತೀಸ್‌ಗಢವನ್ನು ಮುಂಗಾರು ತಲುಪುವ ನಿರೀಕ್ಷೆಯಿದೆ.