Monsoon Rains: ಈ ಬಾರಿಯ ಮುಂಗಾರು ವಾಡಿಕೆಗಿಂತ ಮತ್ತು ನಿರೀಕ್ಷೆಗಿಂತ ಬಹುಬೇಗನೇ ಕರಾವಳಿ ಗಡಿ ಪ್ರವೇಶಿಸಿದ್ದು, ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಆಯಾ ರಾಜ್ಯಗಳು ಮತ್ತು ಕಡಲ ತೀರ ಪ್ರದೇಶಗಳಿಗೆ ರೆಡ್, ಯೆಲ್ಲೋ ಅಲರ್ಟ್ಗಳನ್ನು ಘೋಷಿಸಿದೆ. ಈ ಮಧ್ಯೆ ರಾಷ್ಟ್ರ ರಾಜಧಾನಿ, ಮುಂಬೈ, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ.
ನೈಋತ್ಯ ಮುಂಗಾರು ಚಲಿಸುತ್ತಿದ್ದು, ಶನಿವಾರ (ಮೇ.24) ಕೇರಳ ರಾಜ್ಯವನ್ನು ಅಪ್ಪಳಿಸಿದೆ. ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದೆ. ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳಿಗೆ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸ್ಪಷ್ಟಪಡಿಸಿದೆ. ಮುಂದಿನ ಮೂರು ದಿನಗಳಲ್ಲಿ ತೆಲಂಗಾಣ ರಾಜ್ಯದ ಹಲವೆಡೆ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಈ ಕ್ರಮದಲ್ಲಿ, ತೆಲಂಗಾಣದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನೈಋತ್ಯ ಮುಂಗಾರು ಪ್ರವೇಶದ ಬೆನ್ನಲ್ಲೇ ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಬರುವ ವಾರಗಳಲ್ಲಿ ರಾಜ್ಯದಲ್ಲಿ ಭಾರೀ ಅಥವಾ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ಈ ಹಿನ್ನೆಲೆ ಕೇರಳದ 11 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲಿ 24 ಗಂಟೆಗಳಲ್ಲಿ 20 ಸೆಂಟಿಮೀಟರ್‌ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಕೇರಳ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಉಲ್ಲೇಖಿಸಿದೆ. ಪ್ರಸ್ತುತ, ಅಧಿಕಾರಿಗಳು ಆಲಪ್ಪುಳ, ಎರ್ನಾಕುಲಂ, ಕಣ್ಣೂರು, ಕಾಸರಗೋಡು, ಕೊಲ್ಲಂ, ಕೋಯಿಕ್ಕೋಡ್, ಮಲಪ್ಪುರಂ ಮತ್ತು ತ್ರಿಶೂರ್ ಕರಾವಳಿ ಪ್ರದೇಶಗಳ ಜನರಿಗೆ ಎಚ್ಚರಿಕೆ ಕೊಟ್ಟಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಕಾರ್ಮಿಕ ಸಂಘಟನೆಯ ನಾಯಕರು ವಿಧಾನಸಭೆಗೆ ಆಯ್ಕೆಯಾಗಲಿ: ಐಎನ್ಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮಿವೆಂಕಟೇಶ್ ಅಭಿಮತ
ಕಳೆದ ಒಂದೆರೆಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಹಾರಾಷ್ಟ್ರದ ಮುಂಬೈ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ರಾಜ್ಯಗಳು ನಲುಗಿವೆ. ವರುಣನ ಆರ್ಭಟಕ್ಕೆ ಸಿಲುಕಿದ ಮುಂಬೈ ಜನರು, ಗುಡುಗು ಮಿಂಚು ಸಹಿತ ನಿರಂತರ ಮಳೆಗೆ ತತ್ತರಿಸಿದ್ದಾರೆ. ಮುಂಬೈ, ಕೊಂಕಣ ಗಡಿಭಾಗಗಳಲ್ಲಿ ವರುಣಾರ್ಭಟ ಬಲು ಜೋರಾಗಿದೆ. ನಿರಂತರವಾಗಿ ಸುರಿದ ಮಳೆಗೆ ಮುಂಬೈ ಮೆಟ್ರೋ ನಿಲ್ದಾಣಕ್ಕೆ ನೀರು ನುಗ್ಗಿದ್ದು, ಟಿಕೆಟ್ ಕೌಂಟರ್ಗಳು ಜಲಾವೃತಗೊಂಡಿವೆ. ಈ ಪರಿಸ್ಥಿತಿ ಜನರನ್ನು ಮನೆಯಿಂದ ಹೊರಬರದಂತೆ ಮಾಡಿದೆ,(ಏಜೆನ್ಸೀಸ್).