ನ್ಯೂಸ್

ರಾಜ್ಯದಲ್ಲಿ ಮಂಕಿ ಪಾಕ್ಸ್ ಪ್ರಕರಣ

ಬಾಬುಪ್ರಸಾದ್​ ಮೋಡಿಸ್​

ಬೆಂಗಳೂರು: ರಾಜ್ಯದಲ್ಲಿ ಮಂಕಿ ಪಾಕ್ಸ್ (ಎಂ -ಪಾಕ್ಸ್) ಪ್ರಕರಣ ವರದಿಯಾಗಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ಮೂಲಕ 40 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ರೋಗಿಯ ಪತ್ನಿ ಹಾಗೂ ಇತರ 19 ಪ್ರಾಥಮಿಕ ಸಂರ್ಪತರನ್ನು ಪತ್ತೆ ಮಾಡಿ ಅವರ ಆರೋಗ್ಯ ತಪಾಸಣೆ ನಡೆಸಿ, ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. ದ್ವಿತೀಯ ಸಂರ್ಪತರ ಪತ್ತೆ ಕಾರ್ಯ ಮುಂದುವರಿಸಲಾಗಿದೆ. ಎಲ್ಲ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜ.17ರಂದು ದುಬೈನಿಂದ ಮಂಗಳೂರಿಗೆ ಪ್ರಯಾಣ ಮಾಡಿದ್ದ ಈ ವ್ಯಕ್ತಿ ಮಂಗಳೂರಿಗೆ ಬಂದ ವೇಳೆ ದೇಹದ ಮೇಲೆ ದದ್ದುಗಳು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ. ಈ ವೇಳೆ ಶಂಕಿತ ಮಂಕಿ ಪಾಕ್ಸ್ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಇರಿಸಿ, ಮಾದರಿ ಸಂಗ್ರಹಿಸಿ ಬೆಂಗಳೂರಿನ ಬಿಎಂಸಿಆರ್​ಐ (ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ)ಗೆ ಕಳುಹಿಸಲಾಗಿತ್ತು. ಸೋಂಕು ದೃಢೀಕರಣಕ್ಕಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿದ ವೇಳೆ ಸೋಂಕು ಹೊಂದಿರುವುದಾಗಿ ವರದಿ ತಿಳಿಸಿದೆ.

ಲಕ್ಷಣಗಳು ಮತ್ತು ಚಿಹ್ನೆಗಳು: ಜ್ವರ, ಲಿಂಫಡೆನೋಪಥಿ, ತಲೆನೋವು, ಸ್ನಾಯುನೋವು, ಬಳಲಿಕೆ, ಶೀತ ಅಥವಾ ಬೆವರು, ಗಂಟಲು ನೋವು ಮತ್ತು ಕೆಮ್ಮು, ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುವಂತೆ ಈ ಸೋಂಕಿಗೆ ಒಳಗಾದ ರೋಗಿಯನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು.

ಲಸಿಕೆ: ಪ್ರಸ್ತುತ 2 ಲಸಿಕೆಗಳು ಲಭ್ಯವಿದ್ದು, ಪ್ರವಾಸ ಹಾಗೂ ಉದ್ಯೋಗ ನಿಮಿತ್ತ ಹೊರ ದೇಶಗಳಿಗೆ ಪ್ರಯಾಣ ಮಾಡುವವರಿಗೆ ನಿಯಮಾನುಸಾರ ಲಸಿಕೆ ಹಾಕಲಾಗುತ್ತದೆ.

ಮಂಕಿಪಾಕ್ಸ್ ಕಾಣಿಸಿಕೊಂಡಿದ್ದ ವ್ಯಕ್ತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರು ಈಗಾಗಲೇ ಪೂರ್ಣ ಗುಣವಾಗಿದ್ದಾರೆ. ರೋಗಿಯ ಸಂಬಂಧಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾರಲ್ಲಿಯೂ ರೋಗ ಲಕ್ಷಣ ಕಂಡುಬಂದಿಲ್ಲ. | ಡಾ. ಕೆ. ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ