ನ್ಯೂಸ್

ಮನಿ ಲ್ಯಾಂಡರಿಂಗ್ ಕೇಸ್ ನೆಪ; ವೃದ್ಧೆಗೆ 1.24 ಕೋಟಿ ವಂಚನೆ

ಬೆಂಗಳೂರು: ಮನಿ ಲ್ಯಾಂಡರಿಂಗ್ ಕೇಸ್ ದಾಖಲಾಗಿರುವುದಾಗಿ ಬೆದರಿಸಿ ವೃದ್ಧೆಯಿಂದ 1.24 ಕೋಟಿ ರೂ. ಅನ್ನು ಸೈಬರ್ ಕಳ್ಳರು ಸುಲಿಗೆ ಮಾಡಿದ್ದಾರೆ.

ಡಾ. ರಾಜ್‌ಕುಮಾರ್ ರಸ್ತೆ, ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ನಿವಾಸಿ ವಸಂತ ಕೋಕಿಲಂ (83) ವಂಚನೆಗೆ ಒಳಗಾದವರು. ಇವರಿಗೆ ಅಕ್ಟೋಬರ್ 10ರ ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಮುಂಬೈ ಪೊಲೀಸ್ ಎಂದು ಪರಿಚಯ ಮಾಡಿಕೊಂಡು ನಿಮ್ಮ ಮೊಬೈಲ್ ಮತ್ತು ಆಧಾರ್ ನಂಬರ್ ದುರ್ಬಳಕೆ ಮಾಡಿಕೊಂಡು ಮನಿ ಲ್ಯಾಂಡರಿಂಗ್ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಿಮ್ಮ ಜತೆಗೆ ಹಿರಿಯ ಅಧಿಕಾರಿಗಳು ಮಾತನಾಡಲಿದ್ದಾರೆ. ಆನಂತರ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಕರೆ ಸ್ಥಗಿತಗೊಳಿಸಿದ್ದಾನೆ.

ಇದಾದ ಕೆಲವೇ ನಿಮಿಷಕ್ಕೆ ವಾಟ್ಸ್‌ಆ್ಯಪ್ ಕಾಲ್ ಮಾಡಿದ ಮತ್ತೊಬ್ಬ ವ್ಯಕ್ತಿ, ಸಿಬಿಐ ಅಧಿಕಾರಿ ಎಂದು ಹೇಳಿ ನಿಮ್ಮ ವಿರುದ್ಧ ಎ್ಐಆರ್ ದಾಖಲಾಗಿದೆ. ವರ್ಚುವಲ್ ವಿಚಾರಣೆ ನಡೆಸಬೇಕಿದೆ. ಮೊದಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಆಧಾರ್, ಪಾನ್ ನಂಬರ್ ಬೇಕೆಂದು ಹೇಳಿ ಪಡೆದುಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆದಿದೆ. ಆದರಿಂದ ಬಂಧನ ಮಾಡಬೇಕಾಗಿದೆ. ಆದರೆ, ನೀವು ಅಮಾಯಕರು ಎಂಬುದು ಗೊತ್ತಾಗುತ್ತಿದೆ. ನೀವು ಒಪ್ಪಿದರೆ ಆನ್‌ಲೈನ್‌ನಲ್ಲಿಯೇ ವಿಚಾರಣೆ ನಡೆಸಿ ಆರೋಪಮುಕ್ತ ಮಾಡುತ್ತೇವೆ ಎಂದು ಪುಸಲಾಯಿಸಿದ್ದಾನೆ. ಹೆದರಿದ್ದ ವೃದ್ಧೆ, ಒಪ್ಪಿದಾಗ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್‌ಬಿಐ ಖಾತೆಗೆ ವರ್ಗಾವಣೆ ಮಾಡಿ. ತನಿಖೆ ಪೂರ್ಣವಾದ ಮೇಲೆ ವಾಪಸ್ ನಿಮ್ಮ ಖಾತೆಗೆ ಬರಲಿದೆ ಎಂದು ಭರವಸೆ ನೀಡಿದ್ದಾನೆ.

ವೃದ್ಧೆ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 1.24 ಕೋಟಿ ರೂ. ಅನ್ನು ಹಂತ ಹಂತವಾಗಿ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಕೊನೆಗೊಂದು ದಿನ ಆರೋಪಿಗಳು ಸಂಪರ್ಕಕ್ಕೆ ಲಭ್ಯವಾಗಿಲ್ಲ. ಇತ್ತೀಚೆಗೆ ಈ ಬಗ್ಗೆ ಕುಟುಂಬಸ್ಥರ ಬಳಿ ವೃದ್ಧೆ ಹೇಳಿಕೊಂಡಾಗ, ಇದೊಂದು ಸೈಬರ್ ಕ್ರೈಂ ಎಂಬುದು ಗೊತ್ತಾಗಿ ಸಿಸಿಬಿ ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.