ಅಪ್ಪನ ಕಡೆಯವರು ಬಂದರೆ ಅಮ್ಮನಿಗೆ ಟೆನ್ಷನ್ ಶುರು? 
ನ್ಯೂಸ್

ಅಪ್ಪನ ಕಡೆಯವರು ಬಂದರೆ ಅಮ್ಮನಿಗೆ ಅಲರ್ಜಿ, ತವರು ಮನೆಯವರೆಂದರೆ ಫುಲ್ ಎನರ್ಜಿ! ಯಾಕೆ? | Father's relatives

Father's relatives: ಬಹಳಷ್ಟು ಮನೆಗಳಲ್ಲಿ ಒಂದು ವಿಷಯ ಕಾಮನ್ ಆಗಿ ಕಾಣಿಸುತ್ತೆ. ಅಪ್ಪನ ಕಡೆಯ ಸಂಬಂಧಿಕರು ಮನೆಗೆ ಬರ್ತಾರೆ ಅಂದ್ರೆ ಅಮ್ಮನಿಗೆ ಅಷ್ಟೊಂದು ಖುಷಿ ಇರಲ್ಲ. ಇನ್ನು ಕೆಲವೊಮ್ಮೆ ಅವರ ಹೆಸರು ಕೇಳಿದ್ರೇ ಸಾಕು, ಮುಖದಲ್ಲಿ ಬೇಸರ, ಸಿಟ್ಟು ಕಾಣಿಸಿಕೊಳ್ಳುತ್ತೆ. ಆದ್ರೆ ಇದಕ್ಕೆ ಬರೀ ದ್ವೇಷ ಅಥವಾ ಅಸೂಯೆ ಮಾತ್ರ ಕಾರಣವಲ್ಲ. ಇದರ ಹಿಂದೆ ಹಲವು ಹಳೆಯ ಅನುಭವಗಳು ಮತ್ತು ಭಾವನಾತ್ಮಕ ವಿಚಾರಗಳು ಇರಬಹುದು.

ಎಲ್ಲ ಅಮ್ಮಂದಿರೂ ಹೀಗೆ ಇರುತ್ತಾರೆ ಅಂತಲ್ಲ. ಆದ್ರೆ ಮನೋವಿಜ್ಞಾನದ ಪ್ರಕಾರ, ಇಂತಹ ವರ್ತನೆಯ ಹಿಂದೆ ಕೆಲವು ಪ್ರಮುಖ ಕಾರಣಗಳು ಇರಬಹುದು.

ಅಪ್ಪನ ಕಡೆಯ ಸಂಬಂಧಿಕರನ್ನು ಇಷ್ಟಪಡದಿರಲು 6 ಕಾರಣಗಳು

1. ಮದುವೆಯ ನಂತರದ ಹೊಂದಾಣಿಕೆಯ ಒತ್ತಡ

ಮದುವೆಯಾದ ಬಳಿಕ ಗಂಡನ ಕುಟುಂಬದವರೊಂದಿಗೆ ಹೊಂದಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅತ್ತೆ, ಮಾವ ಸೇರಿದಂತೆ ಹೊಸ ಸಂಬಂಧಗಳ ನಡುವೆ ತಮ್ಮ ಸ್ಥಾನ ಕಂಡುಕೊಳ್ಳುವುದು ಕೆಲವರಿಗೆ ಸವಾಲಾಗಬಹುದು. ತಮ್ಮ ಅಭಿಪ್ರಾಯ ಮತ್ತು ಸ್ವಾತಂತ್ರ್ಯಕ್ಕೆ ಬೆಲೆ ಸಿಗುತ್ತಿಲ್ಲ ಎಂಬ ಭಾವನೆ ಅಸಮಾಧಾನಕ್ಕೆ ಕಾರಣವಾಗಬಹುದು.

2. ಹಳೆಯ ನೋವು ಮತ್ತು ಕೆಟ್ಟ ಅನುಭವಗಳು

ಗಂಡನ ಕಡೆಯ ಸಂಬಂಧಿಕರಿಂದ ಹಿಂದೆ ಅವಮಾನ, ಟೀಕೆ, ನಿರ್ಲಕ್ಷ್ಯ ಅಥವಾ ಅನ್ಯಾಯವಾಗಿದ್ದರೆ ಆ ಘಟನೆಗಳು ಮನಸ್ಸಿನಲ್ಲಿ ಉಳಿಯಬಹುದು. ಮತ್ತೆ ಅದೇ ವ್ಯಕ್ತಿಗಳು ಮನೆಗೆ ಬಂದಾಗ ಹಳೆಯ ಘಟನೆಗಳು ನೆನಪಾಗಿ ಬೇಸರ ಅಥವಾ ಕೋಪ ಉಂಟಾಗಬಹುದು. ಇದನ್ನು ಮನೋವಿಜ್ಞಾನದಲ್ಲಿ ಎಮೋಷನಲ್ ಟ್ರಿಗರ್ ಎಂದು ಕರೆಯಲಾಗುತ್ತೆ.

3. ಗಂಡನ ಗಮನ ಮತ್ತು ಆದ್ಯತೆಯ ವಿಚಾರ

ಕೆಲವೊಮ್ಮೆ ಗಂಡ ತನ್ನ ಮನೆಯವರಿಗೇ ಹೆಚ್ಚು ಬೆಲೆ ಕೊಡುತ್ತಾನೆ, ತನ್ನ ಅಭಿಪ್ರಾಯಕ್ಕೆ ಅಷ್ಟೊಂದು ಬೆಲೆ ಕೊಡ್ತಿಲ್ಲ ಅನ್ನೋ ಭಾವನೆ ಹೆಂಡತಿಗೆ ಬರಬಹುದು. ಮನೆಯ ವಿಚಾರಗಳಲ್ಲಿ ಸಂಬಂಧಿಕರು ಪದೇಪದೆ ತಲೆ ಹಾಕಿದಾಗ ಹೆಂಡತಿಯ ಬೇಸರ ಮತ್ತು ಅಸಮಾಧಾನ ಇನ್ನಷ್ಟು ಹೆಚ್ಚಾಗಬಹುದು.

4. ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ

ಪ್ರತಿಯೊಂದು ಗಂಡ-ಹೆಂಡತಿಯ ಜೀವನದಲ್ಲೂ ಅವರದ್ದೇ ಆದ ಖಾಸಗಿತನ ಮತ್ತು ಸ್ವಾತಂತ್ರ್ಯ ಇರಬೇಕು. ಆದರೆ ಸಂಬಂಧಿಕರು ಪದೇಪದೆ ಅವರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದು, ಮನೆಯ ನಿರ್ಧಾರಗಳಲ್ಲಿ ಮೂಗು ತೂರಿಸುವುದು ಅಥವಾ ಮಕ್ಕಳನ್ನು ಬೆಳೆಸುವ ವಿಚಾರದಲ್ಲೂ ಸಲಹೆ ಕೊಡುತ್ತಾ ಹೋದರೆ ಮನಸ್ತಾಪ ಶುರುವಾಗಬಹುದು. ಇಂತಹ ಹಸ್ತಕ್ಷೇಪದಿಂದ ಮನೆಯಲ್ಲಿ ಜಗಳ, ಬೇಸರ ಮತ್ತು ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

5. ಹೋಲಿಕೆ ಮತ್ತು ತಾರತಮ್ಯ

ಕೆಲವು ಮನೆಗಳಲ್ಲಿ ಅಪ್ಪನ ಕಡೆಯ ಸಂಬಂಧಿಕರು ತಮ್ಮ ಮನೆಯವರನ್ನೇ ಹೆಚ್ಚು ಹೊಗಳೋದು, ಅಮ್ಮನ ತವರು ಮನೆಯವರನ್ನ ಕಡಿಮೆ ಮಾಡಿ ಮಾತಾಡೋದು ನಡೆಯುತ್ತಿರುತ್ತೆ. ಇಂತಹ ಹೋಲಿಕೆ ಮತ್ತು ತಾರತಮ್ಯದಿಂದ ಅಮ್ಮನಿಗೆ ಬೇಸರ, ಸಿಟ್ಟು ಮತ್ತು ಕೀಳರಿಮೆ ಭಾವನೆ ಮೂಡಬಹುದು.

6. ಗಂಡನಿಂದ ಸರಿಯಾದ ಸಪೋರ್ಟ್ ಸಿಗದಿರುವುದು

ಸಂಬಂಧಿಕರಿಂದ ಏನಾದರೂ ಸಮಸ್ಯೆಯಾದಾಗ ಗಂಡ ಹೆಂಡತಿಯ ಕಷ್ಟ, ನೋವನ್ನು ಅರ್ಥಮಾಡಿಕೊಳ್ಳದೆ ಯಾವಾಗಲೂ ತನ್ನ ಮನೆಯವರ ಪರ ನಿಂತರೆ, ಹೆಂಡತಿಗೆ ತಾನು ಒಂಟಿಯಾಗಿದ್ದೇನೆ ಅನ್ನಿಸಬಹುದು. ಹೀಗಾಗಿ ಸಮಸ್ಯೆ ಬರೀ ಸಂಬಂಧಿಕರ ಜೊತೆಗಿನ ಮನಸ್ತಾಪ ಮಾತ್ರ ಆಗಿರಲ್ಲ, ಗಂಡ-ಹೆಂಡತಿ ನಡುವೆ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಬೆಂಬಲ ಇಲ್ಲದಿರುವುದೂ ಕಾರಣವಾಗಿರಬಹುದು.

ತವರು ಮನೆಯವರ ಮೇಲೆ ಅಮ್ಮಂದಿರಿಗೆ ಹೆಚ್ಚು ಪ್ರೀತಿ ಯಾಕೆ?

ತವರು ಮನೆ ಅಂದ್ರೆ ಬಾಲ್ಯದಿಂದಲೂ ಬೆಳೆದು ಬಂದ, ಮನಸ್ಸಿಗೆ ಹತ್ತಿರವಾದ ಜಾಗ. ಅಲ್ಲಿ ತಮ್ಮ ನೋವು, ಕಷ್ಟ, ಖುಷಿ ಎಲ್ಲವನ್ನೂ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಬಹುದು. ಆದ್ರೆ ಗಂಡನ ಮನೆಯವರ ಜೊತೆ ಕೆಲವೊಮ್ಮೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ತವರು ಮನೆಯವರ ಜೊತೆ ಅಮ್ಮಂದಿರು ಹೆಚ್ಚು ಆತ್ಮೀಯವಾಗಿರೋದು ಸಹಜ.

ಇದನ್ನೂ ಓದಿ: WhatsApp Web ಬಳಕೆದಾರರಿಗೆ ಬಿಗ್ ಅಲರ್ಟ್! ಯಾಮಾರಿದ್ರೆ ನಿಮ್ಮ ಖಾಸಗಿ ಮಾಹಿತಿ ಆಗುತ್ತೆ ಲೀಕ್​

ಅಮ್ಮನ ಸಿಟ್ಟಿಗೆ ಸಂಬಂಧಿಕರೇ ಕಾರಣವೇ?

ಅಪ್ಪನ ಕಡೆಯ ಸಂಬಂಧಿಕರನ್ನು ಅಮ್ಮ ಇಷ್ಟಪಡಲ್ಲ ಅಂದ್ರೆ ಆಕೆ ಕೆಟ್ಟ ಮನಸ್ಸಿನವಳು ಅಂತ ಅರ್ಥವಲ್ಲ. ಅದೇ ರೀತಿ ಎಲ್ಲ ಸಂಬಂಧಿಕರದ್ದೇ ತಪ್ಪು ಅಂತನೂ ಹೇಳಕ್ಕಾಗಲ್ಲ. ಕೆಲವೊಮ್ಮೆ ವ್ಯಕ್ತಿಗಿಂತ ಅವರಿಂದ ಹಿಂದೆ ಆದ ಕೆಟ್ಟ ಅನುಭವಗಳೇ ಹೆಚ್ಚು ನೋವು ಕೊಡುತ್ತವೆ. ಇಂತಹ ಮನಸ್ತಾಪ ಕಡಿಮೆ ಆಗಬೇಕಂದ್ರೆ ಕುಟುಂಬದಲ್ಲಿ ಪರಸ್ಪರ ಗೌರವ, ಒಳ್ಳೆಯ ಮಾತುಕತೆ ಮತ್ತು ಗಂಡನ ಬೆಂಬಲ ತುಂಬಾ ಮುಖ್ಯ. ಎಲ್ಲ ಕುಟುಂಬಗಳಲ್ಲೂ ಪರಿಸ್ಥಿತಿ ಒಂದೇ ರೀತಿ ಇರಲ್ಲ.