ಕಲಬುರಗಿ: ಕಲಬುರಗಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಒಂದರಲ್ಲಿ ಮುಸ್ಲಿಂ ಸಮಾಜದ ಮಜರ್ಅನ್ನು (ಗೋರಿ) ಇಡಲಾಗಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.
ಎರಡು ತಿಂಗಳ ಹಿಂದೆಯೇ ಗ್ರಾಮದ ಮೋಹರಂ ಆಚರಣೆ ಸಮಿತಿಯವರೇ ಮುಂದಾಗಿ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಮಜರ ಇಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಈ ಘಟನ ನಡೆದಿದೆ. ಅವರು ಶಾಲೆಯ ಗೇಟ್ ಬೀಗ ಮುರಿದು ಅತಿಕ್ರಮಣ ಮಾಡಿ ಕೊಠಡಿಯಲ್ಲಿ ಮಜರ್ ಇಟ್ಟಿದ್ದಾರೆ.
ಈ ಮೊದಲು ಗ್ರಾಮದ ಸಂತೆ ಜಾಗದಲ್ಲಿ ಲಾಲ್ ಸಾಹೇಬ್ ನೈಯಿಲೆ ಹೈದರಿ ದರ್ಗಾದ ಮಜರ್ ಇತ್ತು. ಆದರೆ ಗ್ರಾಮ ಪಂಚಾಯತ್ ಸಿಬ್ಬಂದಿ ಸಂತೆ ಜಾಗದಲ್ಲಿದ್ದ ದೇವಸ್ಥಾನ ಮತ್ತು ಮಜರ್ಅನ್ನು ತೆರವುಗೊಳಿಸಿದ್ದರು. ನಂತರ ಗ್ರಾಮದ ಕೆಲ ಮುಸ್ಲಿಮರು ಸೇರಿಕೊಂಡು ಶಾಲಾ ಕೊಠಡಿಯಲ್ಲಿ ಮಜರ್ ಇಟ್ಟಿದ್ದಾರೆ. ಈ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಅದೇ ಕೊಠಡಿಯಲ್ಲಿ ಈ ಗ್ರಾಮಸ್ಥರು ಬಾಡೂಟ ಕೂಡಾ ಮಾಡಿದ್ದಾರೆ. ಸದ್ಯಕ್ಕೆ ಸರ್ಕಾರಿ ಶಾಲಾ ಕೊಠಡಿಗೆ ಸಿಬ್ಬಂದಿಗಳು ಬೀಗ ಹಾಕಿದ್ದಾರೆ. ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಕೂಡಲೇ ಮಜರ್ ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ. ಸೋಮವಾರದೊಳಗಾಗಿ ತೆರವುಗೊಳಿಸದಿದ್ದರೆ ನವಂಬರ್ 29 ರಂದು ಚಲೋ ಬಂದರವಾಡ ನಡೆಸೋ ಎಚ್ಚರಿಕೆ ಕೂಡ ಸ್ವಾಮೀಜಿ ನೀಡಿದ್ದಾರೆ.