ನವದೆಹಲಿ: ರಾಷ್ಟ್ರದೆಲ್ಲೆಡೆ 78ನೇ ಸ್ವಾತಂತ್ರ್ಯ ಸಂಭ್ರಮ ಮನೆಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಷ್ಠಿತ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು, ಸತತ 11ನೇ ಬಾರಿಗೆ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮೋದಿ ಅವರ ಪೋಷಾಕು ವಿಶೇಷ ಆಕರ್ಷಣೆಯಾಗಿತ್ತು. ಬಿಳಿ ಕುರ್ತಾ ಮತ್ತು ತಿಳಿ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ವಿಶೇಷವೆಂದರೆ, ಅವರು ರಾಜಸ್ಥಾನಿ ಲೆಹೆರಿಯಾ ಪ್ರಿಂಟ್ ಪೇಟವನ್ನು ಧರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನದಂದು ವಿಶೇಷ ಪೇಟ ಧರಿಸುವ ಸಂಪ್ರದಾಯವನ್ನು ಪ್ರಧಾನಿ ಮೋದಿ ಈ ಬಾರಿಯೂ ಮುಂದುವರಿಸಿದ್ದಾರೆ. ಈ ಬಾರಿ ಧರಿಸಿದ್ದ ಪೇಟವು ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣದ್ದಾಗಿದೆ. ಪೇಟದ ಉದ್ದನೆಯ ಬಾಲವೂ ಈ ಮೂರು ಬಣ್ಣಗಳ ಸಂಯೋಜನೆಯಾಗಿದೆ. ಇದನ್ನು ರಾಜಸ್ಥಾನದ ಸಾಂಪ್ರದಾಯಿಕ ಜವಳಿ ತಂತ್ರವನ್ನು ಬಳಸಿ ತಯಾರಿಸಲಾಗಿದೆ. ಈ ಲೆಹೆರಿಯಾ ವಿನ್ಯಾಸವು ಥಾರ್ ಮರುಭೂಮಿಯಲ್ಲಿ ಕಂಡುಬರುವ 'ನ್ಯಾಚುರಲ್ ವೇವ್' ಮಾದರಿಯಿಂದ ಪ್ರೇರಿತವಾಗಿದೆ.
ಕಳೆದ ವರ್ಷ, ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಹಳದಿ, ಹಸಿರು ಮತ್ತು ಕೆಂಪು ಬಣ್ಣಗಳ ಸಂಯೋಜನೆಯಿಂದ ತಯಾರಿಸಿದ ರಾಜಸ್ಥಾನಿ ಬಂಧನಿ ಪ್ರಿಂಟ್ ಪೇಟವನ್ನು ಧರಿಸಿದ್ದರು. ತದನಂತರ 2022ರಲ್ಲಿ ಮೋದಿ ಕೆಂಪು ಮಾದರಿಯ ಪೇಟ ಮತ್ತು ಅದಕ್ಕೆ ಕೇಸರಿ ಬಣ್ಣದ ಉದ್ದನೆಯ ಬಾಲದಂತ ಬಟ್ಟೆ ಧರಿಸಿ ವಿಶೇಷ ಆಕರ್ಷಣೆಯಾದರು.
ಬಳಿಕ ಮಾತನಾಡಿದ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರರಿಗೆ ದೇಶ ಸದಾ ಋಣಿಯಾಗಿದೆ. ಆಗ 40 ಕೋಟಿ ಜನ ಬ್ರಿಟಿಷರನ್ನು ಹೊರಹಾಕಿದರು. ಇಂದು ನಾವು 140 ಕೋಟಿ ಜನಸಂಖ್ಯೆಯನ್ನು ಹೊಂದಿದ್ದೇವೆ. ಅಂದು 40 ಕೋಟಿ ಜನರು ಕಷ್ಟದ ಕೆಲಸವನ್ನು ಸಾಧಿಸಿದ್ದಾರೆ. ಇಂದು 140 ಕೋಟಿ ಜನರಿರುವ ನಾವು ದೇಶಕ್ಕಾಗಿ ಬದುಕಬೇಕಾಗಿದೆ. ದೇಶವನ್ನು ಮುನ್ನಡೆಸುವಂತೆ ಪ್ರಧಾನಿ ಮೋದಿ ಕರೆ ನೀಡಿದರು.
ನಮ್ಮ ಕರೋನಾ ವಾರಿಯರ್ಸ್ ನಿರ್ಗತಿಕರಿಗೆ ಸೇವೆ ಸಲ್ಲಿಸಿದ ರೀತಿ, ನಮ್ಮ ಸೈನಿಕರು ಸರ್ಜಿಕಲ್ ಸ್ಟ್ರೈಕ್ ಮಾಡುವುದನ್ನು ನಾವು ನೋಡಿದ್ದೇವೆ. ಮತ್ತು ನಮ್ಮ ವಾಯುಪಡೆಯು ವೈಮಾನಿಕ ದಾಳಿ ನಡೆಸುವುದನ್ನು ನೋಡಿದಾಗ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ತಲೆ ಎತ್ತುತ್ತಾನೆ ಎಂದು ಮೋದಿ ಹೇಳಿದರು.