ಪಾಕಿಸ್ತಾನ: ಕಳೆದ ಅನೇಕ ತಿಂಗಳುಗಳಿಂದ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸಣ್ಣಪುಟ್ಟ ವಸ್ತುಗಳ ಬೆಲೆ ಗಗನಕ್ಕೆರಿದೆ. ಸರ್ಕಾರದ ಬೇಜವಾಬ್ದಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ. ಮೋದಿ ನಮ್ಮ ಪ್ರಧಾನಿಯಾಗಿರಬೇಕಿತ್ತು ಎಂದು ಪಾಕಿಸ್ತಾನದ ಯುವಕ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಪಾಕ್‌ನ ಶೆಹಬಾಜ್ ಷರೀಫ್ ಸರ್ಕಾರದ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವಕ,' ನಮ್ಮ ದುರಾದೃಷ್ಟವೆಂದರೆ ನಾವು ಇಸ್ಲಾಮಿಕ್ ದೇಶವನ್ನು ಪಡೆದಿದ್ದೇವೆ. ಆದರೆ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿಯಾಗಿದ್ದರೆ ನಾವು ಕೂಡ ಸೂಕ್ತ ಬೆಲೆಗೆ ಸರಕುಗಳನ್ನು ಖರೀದಿಸಲು ಸಾಧ್ಯವಾಗುತ್ತಿತ್ತು. ನಮ್ಮಲ್ಲಿ ನರೇಂದ್ರ ಮೋದಿ ಇದ್ದಿದ್ದರೆ, ನಮಗೆ ನವಾಜ್, ಷರೀಫ್ ಅಥವಾ ಬೆನೆಜಿರ್ ಅಥವಾ ಇಮ್ರಾನ್, ಮತ್ತೆ ಜನರಲ್ ಪರ್ವೇಜ್ ಮುಷರಫ್ ಕೂಡ ಬೇಕಾಗುತ್ತಿರಲಿಲ್ಲ. ನಮಗೆ ಬೇಕಿರುವುದು ಪ್ರಧಾನಿ ನರೇಂದ್ರ ಮೋದಿ. ದೇಶದಲ್ಲಿನ ಎಲ್ಲ ದುಷ್ಟ ಶಕ್ತಿಗಳನ್ನು ಅವರು ಮಾತ್ರವೇ ಎದುರಿಸಬಲ್ಲರು. ಭಾರತವು ಪ್ರಸ್ತುತ ಜಗತ್ತಿನ ಐದನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿದೆ. ನಾವು ಲೆಕ್ಕದಲ್ಲಿಯೇ ಇಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾನೆ.
'ಪಾಕಿಸ್ತಾನವು ಭಾರತದಿಂದ ವಿಭಜನೆಯಾಗದೆ ಉಳಿದಿದ್ದರೆ, ತನ್ನ ದೇಶದ ಜನರು ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಮತ್ತು ತಮ್ಮ ಮಕ್ಕಳಿಗೆ ಪ್ರತಿ ರಾತ್ರಿಯೂ ಆಹಾರ ನೀಡಲು ಸಾಧ್ಯವಾಗುತ್ತಿತ್ತು. ಭಾರತದಿಂದ ಪಾಕಿಸ್ತಾನ ಬೇರ್ಪಡಬಾರದಿತ್ತು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಒಂದು ವೇಳೆ ದೇಶ ವಿಭಜನೆ ಆಗಿರದಿರುತ್ತಿದ್ದರೆ ನಾವು ಟೊಮ್ಯಾಟೋಗಳನ್ನು ಪ್ರತಿ ಕೆಜಿಗೆ 20 ರೂ.ದಂತೆ, ಚಿಕನ್ ಅನ್ನು ಕೆಜಿಗೆ 150 ರೂ ಮತ್ತು ಪೆಟ್ರೋಲ್ ಅನ್ನು ಲೀಟರ್‌ಗೆ 50 ರೂಪಾಯಿಗೆ ಖರೀದಿ ಮಾಡಲು ಸಾಧ್ಯವಾಗುತ್ತಿತ್ತು' ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಯೂಟ್ಯೂಬರ್ ಸನಾ ಅಮ್ಜದ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.