ನ್ಯೂಸ್

ದಸರಾ ಫೋಟೋ ನೋಡಿ ಖುಷಿಯಾದ ಪ್ರಧಾನಿ; ಮೈಸೂರು ಭೇಟಿ ಅಚ್ಚುಮೆಚ್ಚಿನ ನೆನಪು ಎಂದ ನರೇಂದ್ರ ಮೋದಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ವೈಭವೋಪೇತ ಮೈಸೂರು ದಸಾರದ ಫೋಟೋ ನೋಡಿ ಫಿದಾ ಆಗಿದ್ದಾರೆ. ಹೌದು, ಈ ವರ್ಷದ ಮೈಸೂರು ದಸರಾ ಸಂಭ್ರಮಕ್ಕೆ ಈಗಾಗಲೇ ತೆರೆಬಿದ್ದಿದೆ. ದಸರಾ ಸಂಭ್ರಮ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿ ಮಾಡಿದ ಟ್ವೀಟ್​ ನೋಡಿ ಮೈಸೂರಿನ ಜನ ಖುಷಿಯಾಗಿದ್ದಾರೆ.

ಆರ್​​ಎಸ್​​ಎಸ್​ ಸ್ವಯಂಸೇವಕ ನಿವಣೆ ಕಾಲನಾಥ್​ ಭಟ್​ ಎಂಬುವರು ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಜೂ ಸವಾರಿಯ ಫೋಟೋವನ್ನು ಟ್ವಿಟರ್​ಗೆ ಅಪ್ಲೋಡ್​ ಮಾಡಿ, ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿದ್ದರು. ಇವರ ಟ್ವೀಟ್​ ಅನ್ನು ರೀಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೈಸೂರು ದಸರಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೈಸೂರು ದಸರಾ ಅದ್ಭುತವಾಗಿದೆ. ತಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಸುಂದರವಾಗಿ ಉಳಿಸಿಕೊಂಡು ಬಂದಿರುವ ಮೈಸೂರಿನ ಜನತೆಯನ್ನು ನಾನು ಪ್ರಶಂಸಿಸುತ್ತೇನೆ. 2022ರ ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿಗೆ ಭೇಟಿ ನೀಡಿದ ಸಮಯ ಅಚ್ಚುಮೆಚ್ಚಿನ ನೆನಪು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.