ನ್ಯೂಸ್

ಭಾರತದ ಅಭಿವೃದ್ಧಿ ಕಂಡು ವಿಶ್ವವೇ ಅಚ್ಚರಿಗೊಂಡಿದೆ; ಪ್ರಧಾನಿ ಮೋದಿ

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಷ್ಯಾ ಪ್ರವಾಸದಲ್ಲಿ ಮಂಗಳವಾರ (ಜುಲೈ 9) ಮಾಸ್ಕೋದಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಭಾರತವು ಸಾಧಿಸಿರುವ ಅಭಿವೃದ್ಧಿಯ ವೇಗವನ್ನು ನೋಡಿ ಜಗತ್ತೇ ಆಶ್ಚರ್ಯಗೊಂಡಿದೆ ಎಂದು ಹೇಳಿದರು.

ನಾನು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಈ ಬಾರಿಯ ಅಧಿಕಾರವಧಿಯಲ್ಲಿ ಮೂರು ಪಟ್ಟು ವೇಗವಾಗಿ ಮತ್ತು ಮೂರು ಪಟ್ಟು ಹೆಚ್ಚು ಶಕ್ತಿಯೊಂದಿಗೆ ಕೆಲಸ ಮಾಡಲು ಪ್ರಮಾಣ ಮಾಡಿದ್ದೇನೆ. ಪ್ರಪಂಚದ ಜನರು ಭಾರತಕ್ಕೆ ಬಂದಾಗ ಅವರು ಭಾರತ ಬದಲಾಗುತ್ತಿದೆ ಎಂದು ಹೇಳುತ್ತಾರೆ. ಅವರು ಭಾರತದ ಪುನರುಜ್ಜೀವನವನ್ನು, ಭಾರತದ ಪುನರ್ನಿರ್ಮಾಣವನ್ನು ಸ್ಪಷ್ಟವಾಗಿ ನೋಡಲು ಸಮರ್ಥರಾಗಿದ್ದಾರೆ ಎಂದಿದ್ದಾರೆ.

ಭಾರತಕ್ಕೆ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಕೇವಲ ಒಂದು ದಶಕವೇ ಬೇಕಾಯಿತು. 40,000 ಕಿಲೋಮೀಟರ್‌ಗಿಂತಲೂ ಹೆಚ್ಚು ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲು ಭಾರತಕ್ಕೆ ಕೇವಲ ಒಂದು ದಶಕ ಬೇಕಾಯಿತು. ಇದು ನಮ್ಮ ದೇಶದ ಬಗ್ಗೆ ಜಗತ್ತಿಗೆ ತೋರಿಸಿದೆ. ಇದು 'ಭಾರತ ಬದಲಾಗುತ್ತಿದೆ' ಎಂದು ಜಗತ್ತನ್ನು ನಂಬುವಂತೆ ಮಾಡುತ್ತದೆ ಎಂದು ಹೇಳಿದರು.

ಮೂರನೇ ಅವಧಿಯಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿ ಇದೆ. ಆದರೆ ಸರ್ಕಾರದ ಹಲವು ಗುರಿಗಳಲ್ಲಿ ಭಾರತದ ಅಭಿವೃದ್ಧಿ 3ನೇ ಸ್ಥಾನ ಪಡೆದಿರುವುದು ಕೂಡ ಕಾಕತಾಳೀಯ ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೆ, ಚುನಾವಣೆ ಸಮಯದಲ್ಲಿ ಕಳೆದ 10 ವರ್ಷಗಳಲ್ಲಿ ಭಾರತ ಮಾಡಿರುವ ಅಭಿವೃದ್ಧಿ ಕೇವಲ ಟ್ರೇಲರ್ ಎಂದು ಹೇಳಿದ್ದೆ. ಮುಂಬರುವ 10 ವರ್ಷಗಳಲ್ಲಿ ಭಾರತವು ಇನ್ನಷ್ಟು ವೇಗವಾಗಿ ಅಭಿವೃದ್ಧಿ ಹೊಂದಲಿವೆ. ಇದು ವಿಶ್ವ ಅಭಿವೃದ್ಧಿಯ ಭಾರತದ ಹೊಸ ಅಧ್ಯಾಯ ಎಂದು ಹೇಳಿದ್ದಾರೆ. (ಏಜೆನ್ಸೀಸ್​​)