ನವದೆಹಲಿ: ಗಾಜಾ ಸಂಘರ್ಷ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶಗಳ ಪ್ರಸ್ತಾವನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಗಾಜಾ ಯುದ್ಧ ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ಸಮಗ್ರ ಯೋಜನೆ ರೂಪಿಸಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ಯಾಲೆಸ್ತೀನ್ ಮತ್ತು ಇಸ್ರೇಲಿ ಜನರಿಗೆ ಹಾಗೂ ವಿಶಾಲ ಮಧ್ಯಪ್ರಾಚ್ಯ ಪ್ರದೇಶಕ್ಕೆ ದೀರ್ಘಕಾಲೀನ ಮತ್ತು ಸುಸ್ಥಿರ ಶಾಂತಿ, ಭದ್ರತೆ, ಅಭಿವೃದ್ಧಿಗೆ ಪೂರಕವಾದ ಮಾರ್ಗ ಒದಗಿಸುತ್ತದೆ. ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿ ಸ್ಥಾಪಿಸುವ ಟ್ರಂಪ್ ಅವರ ಈ ಪ್ರಯತ್ನವನ್ನು ಎಲ್ಲರೂ ಬೆಂಬಲಿಸುತ್ತಾರೆ ಎಂದು ಮೋದಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಬ್ಬರೂ ನಾಯಕರ ಚರ್ಚೆಯ ಬಳಿಕ ಶ್ವೇತಭವನ ಗಾಜಾ ಯೋಜನೆಯ 20 ಅಂಶಗಳ ಪ್ರಸ್ತಾವನೆ ಬಿಡುಗಡೆ ಮಾಡಿತ್ತು. ನೆತನ್ಯಾಹು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ, ಆದರೆ ಹಮಾಸ್ ಇದಕ್ಕೆ ಒಪ್ಪಿಗೆ ನೀಡಬೇಕಿದೆ. ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲು
ಹಮಾಸ್ಗೆ 3-4 ದಿನಗಳ ಕಾಲಾವಕಾಶವಿದೆ. ಅವರು ಪ್ರಸ್ತಾವನೆಯನ್ನು ತಿರಸ್ಕರಿಸಿದರೆ ಇಸ್ರೇಲ್ಗೆ ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಪ್ರಸ್ತಾವನೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಲು ಕರೆ ನೀಡುತ್ತದೆ. ಈ ಒಪ್ಪಂದಕ್ಕೆ ಎರಡೂ ಕಡೆಯವರು ಒಪ್ಪಿಗೆ ನೀಡಿದ 72 ಗಂಟೆಯೊಳಗೆ ಹಮಾಸ್ ತನ್ನ ಬಳಿ ಇರುವ ಒತ್ತೆಯಾಳುಗಳನ್ನು ಮತ್ತು ಮೃತಪಟ್ಟ ಒತ್ತೆಯಾಳುಗಳ ಶವಗಳನ್ನು ಹಸ್ತಾಂತರಿಸಬೇಕು. ಇಸ್ರೇಲ್ ತನ್ನ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 250 ಪ್ಯಾಲೆಸ್ತೀನಿಯರು ಮತ್ತು ಯುದ್ಧದ ಸಮಯದಲ್ಲಿ ಬಂಧಿಸಲ್ಪಟ್ಟ 1700 ಜನರನ್ನು ಬಿಡುಗಡೆಗೊಳಿಸಲಿದೆ. ಪ್ರತಿ ಒತ್ತೆಯಾಳುವಿನ ಶವಕ್ಕೆ ಪ್ರತಿಯಾಗಿ 15 ಪ್ಯಾಲೆಸ್ತೀನಿಯರ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು.
ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಿದ ಬಳಿಕ ಇಸ್ರೇಲ್ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಲಿದೆ. ಆದರೆ ಆ ಬಳಿಕ ಅಂತಾರಾಷ್ಟ್ರೀಯ ಪಡೆಗಳನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಗುವುದು. ಗಾಜಾದ ಆಡಳಿತದಲ್ಲಿ ಹಮಾಸ್ ಯಾವುದೇ ಪಾತ್ರ ಹೊಂದಿರಬಾರದು ಮತ್ತು ಸುರಂಗಗಳು ಸೇರಿದಂತೆ ಎಲ್ಲ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಪಡಿಸಬೇಕು. ಶಾಂತಿಯುತವಾಗಿ ಬದುಕಲು ಬಯಸುವ ಹಮಾಸ್ ಸದಸ್ಯರಿಗೆ ಕ್ಷಮಾದಾನ ನೀಡಲಾಗುವುದು ಮತ್ತು ಗಾಜಾ ತೊರೆಯಲು ಅವಕಾಶ ನೀಡಲಾಗುವುದು.
ಅಂತಾರಾಷ್ಟ್ರೀಯ ಪಡೆಗಳು ಹಮಾಸ್ ಉಗ್ರರ ನಿಶ್ಯಸ್ತ್ರೀಕರಣವನ್ನು ಮತ್ತು ಆಡಳಿತ ವ್ಯವಸ್ಥೆಯ ಮೇಲೆ ನಿಗಾ ಇರಿಸಲಿವೆ. ಬಳಿಕ ಕಾನೂನು ಸುವ್ಯವಸ್ಥೆಗಾಗಿ ಪ್ಯಾಲೆಸ್ತೀನ್ ಪೊಲೀಸರಿಗೆ ತರಬೇತಿ ನೀಡಲಿದ್ದಾರೆ. ಈಗಾಗಲೇ ಸಾವಿರಾರು ಪ್ಯಾಲೆಸ್ತೀನಿಯರಿಗೆ ಪೊಲೀಸ್ ತರಬೇತಿ ನೀಡಲಾಗಿದೆ ಎಂದು ಇಸ್ರೇಲ್ ಮತ್ತು ಹಮಾಸ್ ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ತಿಳಿಸಿದೆ. ಗಾಜಾಗೆ ಮಾನವೀಯ ನೆರವು ತಲುಪಲು ಅನುಮತಿ ನೀಡಲಾಗುವುದು, ವಿಶ್ವಸಂಸ್ಥೆ ಮತ್ತು ರೆಡ್ ಕ್ರೆಸೆಂಟ್ ಸೇರಿದಂತೆ ತಟಸ್ಥ
ಅಂತಾರಾಷ್ಟ್ರೀಯ ಸಂಸ್ಥೆಗಳು ಗಾಜಾ ಜನತೆಗೆ ಮಾನವೀಯ ನೆರವು ನೀಡಲಿದ್ದಾರೆ. ಪ್ಯಾಲೆಸ್ತೀನಿಯರನ್ನು ಗಾಜಾದಿಂದ ಹೊರಹಾಕಲಾಗುವುದಿಲ್ಲ ಮತ್ತು ಗಾಜಾವನ್ನು ಪುನರ್ನಿರ್ವಿುಸಲಾಗುವುದು ಎಂದು ಟ್ರಂಪ್ ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಯುದ್ಧಕೊನೆಗೊಳಿಸುವ ಟ್ರಂಪ್ ಪ್ರಸ್ತಾವನೆಗೆ ಚೀನಾ ಮತ್ತು ರಷ್ಯಾ ಸ್ವಾಗತಿಸಿದ್ದು, ಶೀಘ್ರ ಯುದ್ಧ ಕೊನೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ. ಪಾಕ್ ಬೆಂಬಲಕ್ಕೆ ಟ್ರಂಪ್ ಸ್ವಾಗತ ಗಾಜಾ ಸಂಘರ್ಷ ಕೊನೆಗೊಳಿಸುವ ತಮ್ಮ ಯೋಜನೆಗೆ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಪ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಶೇ.100ರಷ್ಟು ಬೆಂಬಲ ಸೂಚಿಸಿದ್ದಾರೆ ಎಂದು ಟ್ರಂಪ್ ಪಾಕಿಸ್ತಾನದ ಪಾತ್ರವನ್ನು ಹೊಗಳಿದ್ದಾರೆ.