ನವದೆಹಲಿ: ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವೆ ಜಟಾಪಟಿ ನಡೆಯುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು ಶ್ಲಾಘಿಸಿದ್ದಾರೆ.
ನ್ಯಾಯಾಲಯದ ತೀರ್ಪಗಳನ್ನು ಕೃತಕ ಬುದ್ಧಿಮತ್ತೆ (ಎಐ) ನೆರವಿನಿಂದ ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡುವ ಸಲಹೆಯನ್ನು ಸಿಜೆಐ ಚಂದ್ರಚೂಡ್ ಮಂಡಿಸಿದ್ದರು. ಎರಡು ದಿನ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಜೆಐ ಚಂದ್ರಚೂಡ್ ಅವರು ಈ ಸಲಹೆ ಮಂಡಿಸಿರುವುದನ್ನು ಟ್ವೀಟ್ನಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ, ಈ ಚಿಂತನೆಯಿಂದ ವಿಶೇಷವಾಗಿ ಯುವಜನತೆಗೆ ನೆರವಾಗುತ್ತದೆ ಎಂದಿದ್ದಾರೆ. ಸಿಜೆಐ ಭಾಷಣದ ವಿಡಿಯೋ ತುಣುಕನ್ನು ಕೂಡ ಪ್ರಧಾನಿ ಟ್ವೀಟ್ ಜೊತೆ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಮುಂಬೈಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಚಂದ್ರಚೂಡ್ ತೀರ್ಪಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯಗೊಳಿಸುವ ಮಹತ್ವವನ್ನು ಪ್ರತಿಪಾದಿಸಿದ್ದರು.
ಪ್ರಧಾನಿ ಹೇಳಿದ್ದೇನು?: ಭಾರತ ವೈವಿಧ್ಯಮಯ ಸಂಸ್ಕೃತಿ, ಭಾಷೆಗಳನ್ನು ಹೊಂದಿದೆ. ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನೇಕ ಕ್ರಮ ಕೈಗೊಂಡಿದೆ. ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದ ಪಠ್ಯಕ್ರಮಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಲಾಗುತ್ತದೆ. ಸ್ಥಳೀಯ ಕೋರ್ಟ್ಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವಂತೆ ಈ ಹಿಂದೆ ಹಲವು ಬಾರಿ ಪ್ರತಿಪಾದಿಸಿದ್ದೆ. ಸ್ಥಳೀಯ ಭಾಷೆಗಳಲ್ಲಿ ತೀರ್ಪು ಲಭ್ಯವಾದರೆ ಸಾಮಾನ್ಯ ಜನರಿಗೆ ನ್ಯಾಯಾಂಗದ ಕಾರ್ಯ ಸರಳವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಬೆಂಗಳೂರು: ನ್ಯಾಯಾಂಗದಲ್ಲಿ ಕನ್ನಡ ಕಷ್ಟಸಾಧ್ಯವಾದರೂ ಪೂರಕ ಕ್ರಮಕೈಗೊಂಡರೆ ಹಂತ ಹಂತವಾಗಿ ಜಾರಿ ಸಾಧ್ಯವಿದೆ. ಮೊದಲಿಗೆ ಕಾನೂನು ನಿಘಂಟು ರಚಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ಭಾನುವಾರ ಏರ್ಪಡಿಸಿದ್ದ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು, ತೀರ್ಪಗಳಿಗೆ ಸಮಾನಾಂತರ ಶಬ್ದಗಳು ಸ್ಥಾಪಿತವಾದರೆ ಅನುಕೂಲವಾಗುತ್ತದೆ. ಈ ಸಂಬಂಧ ತಜ್ಞರ ಸಮಿತಿಯೊಂದನ್ನು ರಚಿಸಿ ಕಾನೂನು ನಿಘಂಟು ಹೊರತರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದರು. ಇದರಿಂದ ನ್ಯಾಯಾಧೀಶರಿಗೆ ಕನ್ನಡ ಬಳಕೆ ಸುಲಭವಾಗಲಿದೆ. ಮಹತ್ವದ ತೀರ್ಪಗಳನ್ನು ಕನ್ನಡಕ್ಕೆ ಅನುವಾದಿಸಿದರೆ ನ್ಯಾಯಾಧೀಶರು, ವಕೀಲರು, ಅಭಿಯೋಜಕರು ಹಾಗೂ ಕಕ್ಷಿದಾರರಿಗೆ ಸಹಾಯವಾಗಲಿದೆ ಎಂದರು. ಪ್ರಮುಖ ತೀರ್ಪಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ನಂತರ ಎಲ್ಲ ನ್ಯಾಯಾಲಯಗಳು ಹಾಗೂ ಗ್ರಂಥಾಲಯಗಳಿಗೆ ವಿತರಿಸಿದರೆ ಹೆಚ್ಚು ಪ್ರಯೋಜನವಾಗಲಿದೆ. ಅಧಿಕಾರಿಗಳಿಗೂ ಪ್ರಾಥಮಿಕ ಮಾಹಿತಿ ಅಗತ್ಯವೆಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.