Patna: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಬಿಹಾರದ ಯುವಕರ ಆಕಾಂಕ್ಷೆಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದೆ, ರಾಜ್ಯವನ್ನು ಪ್ರತಿಯೊಂದು ಅಭಿವೃದ್ಧಿ ಮಾನದಂಡದಲ್ಲೂ ಪ್ರಪಾತಕ್ಕೆ ತಳ್ಳಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಪಕ್ಷ ನಾಯಕ ರಾಹುಲ್, ಇದು ಬದಲಾವಣೆಗೆ ಮತ್ತು ನ್ಯಾಯಕ್ಕಾಗಿ ಮತ್ತು ಮಹಾಘಟಬಂಧನ್ ಮೈತ್ರಿಕೂಟ ಅಧಿಕಾರಕ್ಕೆ ಬರಲು ಸೂಕ್ತ ಸಮಯವಾಗಿದೆ ಎಂದರು.
ಕೆಲವು ದಿನಗಳ ಹಿಂದೆ, ನಾನು ಬಿಹಾರದ ಯುವಕರೊಂದಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ಆಸಕ್ತಿದಾಯಕ ಸಂಭಾಷಣೆ ನಡೆಸಿದೆ. ಈ ಶೋಚನೀಯ ಸ್ಥಿತಿಗೆ ರಾಜ್ಯದ ಒಬ್ಬ ವ್ಯಕ್ತಿ ಮಾತ್ರ ಜವಾಬ್ದಾರನಾಗಿರುತ್ತಾನೆ. ಅದು ಬಿಜೆಪಿ-ಜೆಡಿಯು ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಟೀಕಿಸಿದ್ದಾರೆ. ಶಿಕ್ಷಣ ರಂಗದಲ್ಲಿ, 9 ರಿಂದ 10 ನೇ ತರಗತಿಗಳಲ್ಲಿ ಶಾಲೆ ಬಿಡುವ ಪ್ರಮಾಣದಲ್ಲಿ ಬಿಹಾರ 29 ರಾಜ್ಯಗಳಲ್ಲಿ 27 ನೇ ಸ್ಥಾನದಲ್ಲಿದೆ; 11 ಮತ್ತು 12 ನೇ ತರಗತಿಗಳಲ್ಲಿ ದಾಖಲಾತಿ ದರದಲ್ಲಿ, ಇದು 29 ರಾಜ್ಯಗಳಲ್ಲಿ 28 ನೇ ಸ್ಥಾನದಲ್ಲಿದೆ; ಮತ್ತು ಮಹಿಳಾ ಸಾಕ್ಷರತೆಯಲ್ಲಿ, ರಾಜ್ಯವು 29 ರಾಜ್ಯಗಳಲ್ಲಿ 28 ನೇ ಸ್ಥಾನದಲ್ಲಿದೆ, ಸೇವಾ ವಲಯದಲ್ಲಿ ಉದ್ಯೋಗದ ವಿಷಯದಲ್ಲಿ ಬಿಹಾರ 21 ನೇ ಸ್ಥಾನದಲ್ಲಿದೆ; ಕೈಗಾರಿಕೆ/ಉತ್ಪಾದನಾ ವಲಯದಲ್ಲಿ 23 ನೇ ಸ್ಥಾನದಲ್ಲಿದೆ ಎಂದು ಅಂಕಿ ಅಂಶಗಳ ಸಮೇತ ಬಹಿರಂಗಪಡಿಸಿದರು.
ಇವು ಕೇವಲ ಸಂಖ್ಯೆಗಳಲ್ಲ, ಇದು ಸರ್ಕಾರದ ಸಾಧನೆಯ ಕೈ ಗನ್ನಡಿ ಈ ಡಬಲ್ ಎಂಜಿನ್ ಸರ್ಕಾರ ಬಿಹಾರವನ್ನು ಪ್ರಗತಿಯಿಂದ ಎಷ್ಟರ ಮಟ್ಟಿಗೆ ಹಿಂದಕ್ಕೆ ಎಳೆದಿದೆ ಎಂಬುದಕ್ಕೆ ಸಾಕ್ಷಿ. ನಾನು ಭೇಟಿಯಾದ ಎಲ್ಲಾ ಬಿಹಾರಿ ಯುವಕರು ಅತ್ಯಂತ ಪ್ರತಿಭಾನ್ವಿತರು ಮತ್ತು ಬುದ್ಧಿವಂತರು. ಅವರ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಅವರು ಎಲ್ಲಿ ಬೇಕಾದರೂ ಮಿಂಚಬಹುದು, ಆದರೆ ಸರ್ಕಾರ ಅವರಿಗೆ ಅವಕಾಶಗಳನ್ನು ನೀಡುವ ಬದಲಿಗೆ ನಿರುದ್ಯೋಗ ಮತ್ತು ಹತಾಶೆಯನ್ನು ನೀಡಿದೆ ಎಂದರು.
ಬಿಹಾರವನ್ನು ಹೆಮ್ಮೆಯಿಂದ ಮತ್ತೆ ಬೆಳಗಿಸಲು ಇದು ಬದಲಾವಣೆಯ ಸಮಯ. ನ್ಯಾಯಕ್ಕಾಗಿ ಮಹಾಘಟಬಂಧನ್‌ನ ಸಂಕಲ್ಪವನ್ನು ಪುನರುಚ್ಚರಿಸುವ ಸಮಯ ಎಂದು ಬರೆದುಕೊಂಡಿದ್ದಾರೆ.
ದೆಹಲಿಯಲ್ಲಿ ಓದುತ್ತಿರುವ ಬಿಹಾರದ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಂವಾದದಲ್ಲಿ, ರಾಜ್ಯ ಅಧ್ಯಯನದಿಂದ ಹೊರಹೋಗುವಂತೆ ಒತ್ತಾಯಿಸಿದ್ದಾರೆಯೇ ಎಂಬ ಪ್ರಶ್ನೆಗೆ ಪರೋಕ್ಷವಾಗಿ ಅವರೆಲ್ಲಾ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ರಾಜ್ಯದ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿನಿ "ಬಿಹಾರಿ" ಪದವನ್ನು ವಿಶ್ವವಿದ್ಯಾನಿಲಯಗಳಲ್ಲಿ ನಿಂದನೆಯಾಗಿ ಬಳಸಲಾಗುತ್ತದೆ ಎಂದು ಹೇಳುತ್ತಾ ತಾರತಮ್ಯವನ್ನು ಎತ್ತಿ ತೋರಿಸಿದ್ದಾಳೆ.(ಏಜೆನ್ಸೀಸ್)