ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ರಾಜ್ಯವನ್ನು ನಾಶ ಮಾಡಿದೆ. ಅಲ್ಲದೆ, ರಾಜಕೀಯ ಮಾಡುತ್ತ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ನ ಪ್ರಯೋಜನವನ್ನು ಅಲ್ಲಿನ ರೈತರು ಪಡೆಯದಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ಹಣವನ್ನು ಬಿಡುಗಡೆ ಮಾಡಿ, ಕೃಷಿಕರೊಂದಿಗೆ ಸಂವಾದ ಮಾಡಿದ ನಂತರ ಮಾತನಾಡುತ್ತಿದ್ದರು. ಪಿಎಂ ಕಿಸಾನ್ ಯೋಜನೆ ಪ್ರಕಾರ ದೇಶದ 9 ಕೋಟಿ ರೈತರಿಗೆ ವಾರ್ಷಿಕ 6,000 ರೂಪಾಯಿ ಮೂರು ಸಮಾನ ಕಂತುಗಳಲ್ಲಿ ಲಭ್ಯವಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ 70 ಲಕ್ಷ ರೈತರು ಇದರಿಂದ ವಂಚಿತರಾಗಿದ್ದಾರೆ. ಪಶ್ಚಿಮ ಬಂಗಾಳದ 23 ಲಕ್ಷ ರೈತರು ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಪರಿಶೀಲನೆಯನ್ನು ಆಯಾ ರಾಜ್ಯ ಸರ್ಕಾರಗಳು ಮಾಡುತ್ತವೆ. ಆದರೆ, ಇಲ್ಲಿ ಮಮತಾ ಸರ್ಕಾರ ಈ ಕೆಲಸವನ್ನು ಮಾಡಿಯೇ ಇಲ್ಲ. ಪಿಎಂ ಕಿಸಾನ್ ಸಹಾಯಧನಕ್ಕಾಗಿ ಯಾಕೆ ಪ್ರತಿಭಟನೆಗಳು ನಡೆದಿಲ್ಲ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮೊದಲು ಕಾಶ್ಮೀರ ವಶಪಡಿಸ್ತೇವೆ, ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಅಂದ್ರು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್
ಒಂದೊಮ್ಮೆ ನೀವು ಮಮತಾ ಅವರ 15 ವರ್ಷ ಹಳೆಯ ಭಾಷಣ ಕೇಳಿದ್ರೆ ಬಂಗಾಳವನ್ನು ನಾಶಗೊಳಿಸಿದ ಅವರ ರಾಜಕೀಯ ಸಿದ್ಧಾಂತ ಯಾವುದು ಎಂಬುದು ಮನವರಿಕೆಯಾದೀತು. ಯಾರೆಲ್ಲ ಸ್ವಾರ್ಥ ರಾಜಕಾರಣವನ್ನು ಮಾಡುತ್ತಿದ್ದಾರೆಯೋ ಅಂಥವರನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಪಶ್ಚಿಮ ಬಂಗಾಳದಲ್ಲಿ ರೈತರಿಗೆ ಸಿಗಬೇಕಾದ ಸವಲತ್ತು, ಪ್ರಯೋಜನಗಳ ಬಗ್ಗೆ ಮಾತನಾಡದವರೆಲ್ಲ, ದೆಹಲಿಯಲ್ಲಿನ ಜನರಿಗೆ ಕಿರುಕುಳಕೊಡುತ್ತಿದ್ದಾರೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವುದೆಂಬುದನ್ನೂ ಗಮನಿಸಬೇಕಾಗಿದೆ ಎಂದು ಎಚ್ಚರಿಸಿದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..