ನ್ಯೂಸ್

ಜೀರೋ ಅಲ್ಲ ಜನರಿಂದಲೇ ಮೋದಿ ಹೀರೋ: ಸಚಿವ ಪ್ರಲ್ಹಾದ ಜೋಶಿ | 11 Years report card

ಬೆಂಗಳೂರು: ರಾಜಕೀಯ ಇತಿಹಾಸದಲ್ಲೇ ಭಾರತಕ್ಕಿದು ಪರಿವರ್ತನೆ ಯುಗ. 11 ವರ್ಷದಲ್ಲಿ ಬಡತನವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಬಡತನ ನಿರ್ಮೂಲನೆಗೆ ಮೋದಿ ಸರ್ಕಾರ ಪಣ ತೊಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ವಿತರಣೆ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರದ 11 ವರ್ಷದ ಸಾಧನೆಯ ಅಂಕಿ ಅಂಶಗಳನ್ನು ವಿವರಿಸಿದರು.

ʼವಿಕಾಸವೇ ನಮ್ಮ ಮಂತ್ರ, ಶಾಂತಿ-ಸುವ್ಯವಸ್ಥೆಯೇ ನಮ್ಮ ಧ್ಯೇಯʼವಾಗಿದೆ. ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಭಾರತ ಸದ್ಯ ವಿಶ್ವದ 4ನೇ ಅತಿ ದೊಡ್ಡ ಆರ್ಥಿಕ ದೇಶವಾಗಿದ್ದು, ಇಷ್ಟರಲ್ಲೇ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದರು.

ಬಡತನ ಇಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಲ್ಲಿ ಭಾರತ ಬಡತನ ರೇಖೆಯನ್ನು ಅಳಿಸಿ ಹಾಕುವತ್ತ ಮಹತ್ತರ ಹೆಜ್ಜೆಯಿರಿಸಿದೆ. 2011-12ರಲ್ಲಿ ಶೇ.27.1 ರಷ್ಟಿದ್ದ ಬಡತನ ಪ್ರಮಾಣ ಇದೀಗ ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.5.3ಕ್ಕೆ ಇಳಿದಿದೆ.

26 ಕೋಟಿಗೂ ಹೆಚ್ಚು ಜನ ಬಡತನದಿಂದ ಹೊರ ಬಂದಿದ್ದಾರೆ. ಆರ್ಥಿಕತೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಇದನ್ನು ಖುದ್ದು ವಿಶ್ವ ಬ್ಯಾಂಕ್‌ ವರದಿಯೇ ಹೇಳಿದೆ. ʼಮೋದಿ ಸಾಧನೆ ಶೂನ್ಯ ಎನ್ನುವವರಿಗೆ ವಿಶ್ವ ಬ್ಯಾಂಕೇ ತಕ್ಕ ಉತ್ತರ ಕೊಟ್ಟಿದೆʼ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತ, ಅಭಿವೃದ್ಧಿ ಸಾಧನೆಗೆ ವಿಶ್ವ ಬ್ಯಾಂಕೇ ಮೆಚ್ಚುಗೆ ವ್ಯಕ್ತಪಡಿಸಿದೆ. ಯಾರ ಅವಧಿಯಲ್ಲಿ ಏನೇನು ಸಾಧನೆಯಾಗಿದೆ ಎಂಬುದನ್ನು ಅರಿತುಕೊಳ್ಳಲಿ. ಮೋದಿ ಅವರನ್ನು ಮತ್ತು ಮೋದಿ ಸರ್ಕಾರವನ್ನು ಜನರೇ ಹೀರೋ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.

ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದಲ್ಲೂ ಮುಂದಿದೆ. ಸಂಪುಟದಲ್ಲಿ ಶೇ.20ರಷ್ಟು ಸ್ಥಾನಮಾನ ಸಹ ಹಿಂದುಳಿದವರಿಗೆ ಕೊಟ್ಟ ಉದಾಹರಣೆಯಿಲ್ಲ. ಆದರೆ, ಮೋದಿ ಸರ್ಕಾರ ಮಂತ್ರಿ ಮಂಡಳದಲ್ಲಿ ಶೇ.60ರಷ್ಟು ಎಸ್ಸಿ, ಎಸ್ಟಿಯವರಿಗೆ ಅವಕಾಶ ನೀಡಿ ಸಾಮಾಜಿಕ ನ್ಯಾಯವನ್ನು ಮೆರೆದಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೆಮ್ಮೆಯಿಂದ ಹೇಳಿದರು.

ಕೋವಿಡ್‌ ಸಂಕಷ್ಟ ಎದುರಿಸಿಯೂ ಭಾರತ ತಲೆ ಎತ್ತಿ ನಿಂತಿದೆ. ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಆರೋಪಗಳನ್ನೆಲ್ಲ ಬದಿಗೊತ್ತಿ ಜನರ ರಕ್ಷಣೆಗೆ ಒತ್ತು ಕೊಟ್ಟಿದ್ದೇವೆ. ಡಿಜಿಟಲ್‌ ವ್ಯವಸ್ಥೆ ಕೈಗೊಂಡಾಗ ಮೋದಿ ಅವರಿಗೆ ಹಾಸ್ಯ ಮಾಡಿದ್ದರು. ಆದರೆ ಇಂದು ಶೇ.83ರಷ್ಟು ಯುಪಿಐ ಖಾತೆಗಳಿವೆ. 50.22 ಕೋಟಿ ಜನಧನ್‌ ಖಾತೆ ತೆರೆದು 50 ಲಕ್ಷ ಕೋಟಿ ರೂ.ಗೂ ಅಧಿಕ ಬ್ಯಾಂಕ್‌ ವಹಿವಾಟು ನಡೆಸಿದೆ.

ಒಂಭತ್ತು ರೂ.ಗೆ ಡಾಟಾ ಕನೆಕ್ಷನ್‌

ದೇಶದಲ್ಲಿ 6.93 ಲಕ್ಷ ಸಾವಿರ ಕಿ.ಮೀ. ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸಿದ್ದರಿಂದ ಶೇ.97ರಷ್ಟು ಇಂಟರ್‌ನೆಟ್‌ ವೆಚ್ಚ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಇಂದು ಕೇವಲ ₹9ಗೆ ಡಾಟಾ ಕನೆಕ್ಷನ್‌ ಕೊಡುತ್ತಿದ್ದೇವೆ. ಡಾಲರ್‌ ಲೆಕ್ಕದಲ್ಲಿ 0.09 ಡಾಲರ್‌ ಇದೆ. ಬೇರೆ ರಾಷ್ಟ್ರಗಳಲ್ಲಿ ಇದರ ದುಪ್ಪಟ್ಟಿದೆ. 2014ರಲ್ಲಿ 25 ಕೋಟಿ ಇದ್ದ ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಈಗ 97 ಕೋಟಿ ತಲುಪಿದೆ. ಶೇ.286ರಷ್ಟು ಇಂಟರ್‌ನೆಟ್‌ ಸಂಪರ್ಕ ಹೆಚ್ಚಿದೆ.

ನೀರಾವರಿ, ಗರೀಬ್‌ ಕಲ್ಯಾಣ, ಕೃಷಿ ಯೋಜನೆಗಳಿಗೆ ಹೆಚ್ಚಿನ ಬೆಂಬಲ ನೀಡಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ದೇಶದ 81 ಕೋಟಿ ಜನಕ್ಕೆ ಆಹಾರ ಭದ್ರತೆ ಒದಗಿಸುತ್ತಿದೆ. ಕಳೆದ 65-70 ವರ್ಷಗಳ ಇತಿಹಾದಲ್ಲಿ 70 ರಿಂದ 80 ರೂ ಸಾವಿರ ಕೋಟಿ ಸಾಲ ಮನ್ನಾ ಆಗಿರಬಹುದು. ಆದರೆ, ನಾವು ಕಳೆದ 6 ವರ್ಷದಲ್ಲಿ 3.70 ಲಕ್ಷ ಕೋಟಿ ರೂ ಹಣವನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡಿದ್ದೇವೆ.

ದೇಶದಲ್ಲಿ 16000ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿದ್ದು, ಇದರಿಂದ ₹38000 ಕೋಟಿ ಉಳಿತಾಯವಾಗಿದೆ. ಆದರೆ, ಕಾಂಗ್ರೆಸ್ಸಿಗರಿಗೆ ʼಪ್ರಧಾನಿʼ ಪದವೇ ಅಲರ್ಜಿ ಇರಬೇಕು. ಹಾಗಾಗಿ ರಾಜ್ಯದಲ್ಲಿ ಪಿಎಂ ಜನೌಷಧಿ ಕೇಂದ್ರ ಬಂದ್‌ ಮಾಡಿದ್ದಾರೆ. ಆದರೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಔಷಧಿಗಳೂ ಲಭ್ಯವಾಗುತ್ತಿಲ್ಲ ಎಂದು ಸಚಿವ ಜೋಶಿ ಆಕ್ಷೇಪಿಸಿದರು.

ದೇಶ ರಕ್ಷಣೆಗೆ ಉದಾಹರಣೆ

ಮೊದಲು ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದರು. ಈಗ ಆ ಸ್ಥಿತಿಯಿಲ್ಲ. ಪ್ರಧಾನಿ ಮೋದಿ ಸರ್ಕಾರ ದೇಶ ರಕ್ಷಣೆಗೆ ಬದ್ಧವಾಗಿದೆ. ಇದಕ್ಕೆ ʼಆಪರೇಷನ್‌ ಸಿಂಧೂರ್‌ʼ ಉತ್ತಮ ಉದಾಹರಣೆ ಆಗಿದೆ. ಗಡಿ ಪ್ರದೇಶದಲ್ಲಿ ಸಹ ಉಗ್ರರ ಹುಟ್ಟಡಗಿಸುತ್ತಿದ್ದೇವೆ.

ʼಪಶುಪತಿ-ತಿರುಪತಿʼ ಟೆರಿರಿಸಂ ರೆಡ್‌ ಕಾರಿಡಾರ್‌ ಆಗಿತ್ತು. ಆದರೆ ಇಂದು ಶೇ.70ರಷ್ಟು ಭಯೋತ್ಪಾದನೆ ನಿಗ್ರಹವಾಗಿದೆ. 2026ರ ವೇಳೆಗೆ ನಕ್ಸಲಿಸಂ ಅನ್ನೂ ಸಂಪೂರ್ಣ ತೊಡೆದು ಹಾಕುತ್ತೇವೆ. CDS ರಚನೆ, ರಕ್ಷಣಾ ಪಡೆಗಳಲ್ಲಿನ ಸಮನ್ವಯತೆಯಿಂದ ಇಂದು ʼಆಪರೇಷನ್‌ ಸಿಂಧೂರ್‌ʼ ಯಶಸ್ವಿಯಾಗಿದೆ. ಪಾಕಿಸ್ತಾನದ 11 ವಾಯು ನೆಲೆಗಳಲ್ಲಿ 10ಕ್ಕೆ ಹಾನಿಯಾದ ಬಗ್ಗೆ ಪಾಕಿಸ್ತಾನವೇ ಹೇಳಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.