ನ್ಯೂಸ್

ಪ್ರಧಾನಿ ಮೋದಿ 'ಮನ್ ಕಿ‌ ಬಾತ್'ನಲ್ಲಿ ಮುಧೋಳ ಸೇಬು ಬೆಳೆಗಾರನ ಗುಣಗಾನ; ಬಡ ರೈತನಿಗೆ ಮೆಚ್ಚುಗೆ | Mann Ki Baat

Mann Ki Baat: ಇಂದು (ಏ.27) ತಮ್ಮ 'ಮನ್​ ಕಿ ಬಾತ್'​ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೇಬು ಬೆಳೆಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಕುಳಲಿ ಗ್ರಾಮದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ಶ್ರೀಶೈಲ್ ತೇಲಿ ಎಂಬ ರೈತನಿಗೆ ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದರು. "ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ತೇಲಿ ಅವರು ಬಯಲು ಸೀಮೆ ಪ್ರದೇಶದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ರೀತಿ ಮೆಚ್ಚುವಂತದ್ದು. ಸೇಬನ್ನು ಅತಿ ಹೆಚ್ಚಾಗಿ ಬೆಟ್ಟಗುಡ್ಡದಲ್ಲಿ ಬೆಳೆಯುತ್ತಾರೆ. ಆದ್ರೆ, ಶ್ರೀಶೈಲ್ ಅವರು ಸೇಬು ಬೆಳೆಯಲು ಯೋಗ್ಯವಲ್ಲದ ಪ್ರದೇಶದಲ್ಲಿ ಬೆಳೆದು, ಸಾಧಿಸಿ, ಇತರರಿಗೆ ಸ್ಪೂರ್ತಿಯಾಗಿದ್ದಾರೆ" ಎಂದರು.

"ಆತ ಸೇಬು ಬೆಳೆದಿರುವುದನ್ನು ನೋಡಿದರೆ ನೀವೆಲ್ಲರೂ ಒಮ್ಮೆ ಅಚ್ಚರಿ ಪಡುತ್ತೀರಿ. 35 ಡಿಗ್ರಿ ತಾಪಮಾನಕ್ಕಿಂತಲೂ ಅಧಿಕವಿರುವ ಏಳು ಎಕರೆ ಪ್ರದೇಶದಲ್ಲಿ ಶ್ರೀಶೈಲ್​ ಸೇಬು ಬೆಳೆದಿದ್ದಾರೆ. ಮೊದಲಿಂದಲೂ ಕೃಷಿ ಬಗ್ಗೆ ಅವರಿಗೆ ಆಸಕ್ತಿಯಿತ್ತು. ಸೇಬು ಬೆಳೆಯುವುದರ ಜೊತೆ ಜೊತೆಯಲ್ಲೇ ಒಳ್ಳೆಯ ಆದಾಯ ಕೂಡ ಪಡೆಯುತ್ತಿದ್ದಾರೆ. ಎಕರೆಗೆ ಖರ್ಚುವೆಚ್ಚ ತೆಗೆದು ಮೂರು ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ" ಎಂದು ಮೋದಿ ಖುಷಿ ವ್ಯಕ್ತಪಡಿಸಿದರು.