ನವದೆಹಲಿ: ಭಾರತದ ಹೊಸ ಸಮ್ಮಿಶ್ರ ಸರ್ಕಾರದ 72 ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಈ ಮೊದಲು ಇಂದು 30 ಕ್ಯಾಬಿನೆಟ್ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅವರಲ್ಲಿ 30 ಕ್ಯಾಬಿನೆಟ್ ಮಂತ್ರಿಗಳು, 5 ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಸೇರಿದ್ದಾರೆ.
ಇದನ್ನೂ ಓದಿ:ಮೋದಿ ಪದಗ್ರಹಣದ: 3 ಕೆ.ಜಿ ಶುದ್ಧ ಬೆಳ್ಳಿಯಲ್ಲಿ ಅರಳಿದ ಕಮಲ, ಜಮ್ಮು ಅಭಿಮಾನಿಯಿಂದ ವಿಶೇಷ ಉಡುಗೊರೆ ಸಿದ್ಧ
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ಕೇಂದ್ರ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕ್ರಮವಾಗಿ ಅಮಿತ್ ಶಾ, ಜೆಪಿ ನಡ್ಡಾ, ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಎಚ್.ಡಿ ಕುಮಾರಸ್ವಾಮಿ, ಜೈ ಶಂಕರ್ ಅವರಿಗೆ ರಾಷ್ಟ್ರಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಪ್ರಮಾಣವಚನ ಸ್ವೀಕರಿಸಿದರು. ಎಲ್ಲಾ ನಾಯಕರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಬಿಜೆಪಿ ನಾಯಕ ಎಸ್ ಜೈಶಂಕರ್ ಅವರು ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ನಂತರ ಮನೋಹರ್ ಲಾಲ್ ಖಟ್ಟರ್ ಸಂಪುಟ ಸೇರಿದರು. ಪಿಯೂಷ್ ಗೋಯಲ್ ,ಧರ್ಮೇಂದ್ರ ಪ್ರಧಾನ್ , ಜಿತನ್ ರಾಮ್ ಮಾಂಝಿ , ರಾಜೀವ್ ರಂಜನ್ (ಲಾಲನ್) ಸಿಂಗ್, ಸರ್ಬಾನಂದ ಸೋನೋವಾಲ್ ಪ್ರಮಾಣವಚನ ಸ್ವೀಕರಿಸಿದರು.
ಕಳೆದ ಬಾರಿ ಮೋದಿ ಟೀಂನಲ್ಲಿ ಇದ್ದವರೇ ಭಾಗಶಃ ಮುಂದುವರೆದಿದ್ದು, ಮಿತ್ರ ಪಕ್ಷಗಳಿಗೆ 13 ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ರಾಜ್ಯವಾರು ಅಳೆದು ತೂಗಿ ಸಚಿವ ಸ್ಥಾನಗಳನ್ನು ಮೋದಿ ನೀಡಿದ್ದಾರೆ. ಅನುರಾಗ್ ಠಾಕೂರ್ ಅವರಿಗೆ ಕೊಕ್ ನೀಡಲಾಗಿದೆ.