ಸಾಗರ: ಸೇವಾಸಾಗರ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು, ಇದೀಗ ಸೇವಾಸಾಗರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಆರ್.ಕೆ.ಅಭಿನಂದನ್ ಎರಡು ರೋವರ್‌ಗಳ ಮಾದರಿ ತಯಾರಿಸಿದ್ದಾನೆ. ಈ ವಿದ್ಯಾರ್ಥಿ ತಯಾರಿಸಿದ ಎರಡು ರೋವರ್‌ಗಳು ಯಶಸ್ಸು ಕಂಡಿವೆ.
ಮುಂದಿನ ತಿಂಗಳು ಪಾಂಡಿಚೇರಿಯಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ವಸ್ತು ಪ್ರದರ್ಶನದಲ್ಲಿ ಅಭಿನಂದನ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು, ರೋವರ್‌ಗಳನ್ನು ಪ್ರದರ್ಶಿಸಲಿದ್ದಾನೆ. ಮಂಗಳಗ್ರಹದಲ್ಲಿ ನೀರಿದೆ ಎಂಬುದನ್ನು ಇಸ್ರೋ ಖಚಿತಪಡಿಸಿದೆ. ಚಂದ್ರ, ಮಂಗಳ ಗ್ರಹದಲ್ಲಷ್ಟೇ ಅಲ್ಲದೆ ಬೇರೆ ಯಾವ ಗ್ರಹದಲ್ಲಿ ಅನಿಲಗಳಿವೆ, ಉಷ್ಣತೆ ಎಷ್ಟಿದೆ ಎಂದು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಯಾವುದೇ ಗ್ರಹಕ್ಕೆ ರೋವರ್‌ಗಳನ್ನು ಕಳಿಸಿದರೆ, ಆ ಗ್ರಹದಲ್ಲಿರುವ ಎಲ್ಲ ಮಾಹಿತಿ ಮತ್ತು ವ್ಯತ್ಯಾಸಗಳನ್ನು ಈ ರೋವರ್‌ಗಳ ಮಾದರಿ ಮೂಲಕ ಕಂಡುಹಿಡಿಯಬಹುದು.
ಸೋಲಾರ್ ನೆರವಿಂದಲೂ ಚಲನೆ: ಬ್ಯಾಟರಿ ಹಾಗೂ ಸೋಲಾರ್ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ಸ್ವಯಂ ಚಾಲನೆಗೊಳ್ಳುವ ಈ ರೋವರ್ ಮಾದರಿ ಯಾವುದೇ ಗ್ರಹದಲ್ಲಿ ನಿರಂತರ ಕೆಲಸ ಮಾಡುತ್ತದೆ. ಯಾವುದೇ ಗ್ರಹದಲ್ಲಿ ಯಾವ ವಸ್ತುವೇ ಇರಲಿ. 30 ಸೆಂ.ಮೀ. ದೂರದಿಂದಲೇ ಆ ವಸ್ತುವಿನ ಇರುವಿಕೆಯನ್ನು ಗ್ರಹಿಸಿ ಅಧ್ಯಯನ ಮಾಡುತ್ತದೆ. ಸೌರಶಕ್ತಿ ಬಳಕೆ ಇದರ ಕಾಯಕದ ನಿರಂತರತೆ ಕಾಪಾಡುತ್ತದೆ. ಅಭಿನಂದನ್ ತಯಾರಿಸುವ ಹೊಸ ಮಾದರಿ ಬಾಹ್ಯಾಕಾಶದ ಕುರಿತಂತೆ ಹೊಸ ಹೊಳವು ನೀಡಿದೆ.
ಕೊಳವೆ ಬಾವಿಯಲ್ಲಿ ಸಮಸ್ಯೆ ಪರಿಹಾರ: ಬೋರ್‌ವೆಲ್ ಅಥವಾ ಕೊಳವೆ ಬಾವಿಗಳಿಗೆ ಮಕ್ಕಳು ಬಿದ್ದ ಸಂದರ್ಭದಲ್ಲಿ ಭೂಮಿಯ ಒಳಗೆ ಎಷ್ಟು ಮೀಟರ್‌ನಲ್ಲಿ, ಯಾವ ಪ್ರಮಾಣದಲ್ಲಿ ಆಮ್ಲಜನಕವಿದೆ? ಮಗುವಿನ ಸ್ಥಿತಿಗತಿ ಹೇಗಿದೆ? ಎಂಬುದನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅತೀ ಶೀಘ್ರವಾಗಿ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಅಧಿಕಾರಿಗಳನ್ನು ಕರೆಸಿದಾಗ ಅವರು ಯಾವರೀತಿ ಮಗುವನ್ನು ಅಪಾಯದಿಂದ ಪಾರುಮಾಡಬೇಕು ಎಂಬ ಬಗ್ಗೆಯೂ ರೋವರ್ ನೀಡುವ ಮಾಹಿತಿ ಸಹಕಾರಿಯಾಗುತ್ತದೆ.
ನಾನು ತಯಾರಿಸಿರುವ 2 ರೋವರ್‌ಗಳು ಬಾಹ್ಯಾಕಾಶದ ಸೂಕ್ಷ್ಮ ವಿಚಾರಗಳನ್ನು ತಿಳಿಸುತ್ತವೆ. ಎರಡೂ ರೋವರ್‌ಗಳು ಬ್ಯಾಟರಿ ಹಾಗೂ ಸೂರ್ಯನ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ಸ್ವಯಂ ಚಾಲನೆಯಾಗುವ ಜತೆಯಲ್ಲಿ ಯಾವುದೇ ಗ್ರಹದಲ್ಲಿಯೂ ನಿರಂತರವಾಗಿ ಕೆಲಸ ಮಾಡುತ್ತದೆ. ಅಪರೂಪದ ಮಾಹಿತಿ ಸಂಗ್ರಹಿಸುತ್ತದೆ. ಅಲ್ಲಿನ ಹವಾಮಾನದಿಂದ ಹಿಡಿದು ಎಲ್ಲ ಸಂಗತಿಗಳನ್ನೂ ತಿಳಿಸುತ್ತದೆ. ನನ್ನ ಈ ಸಂಶೋಧನಾ ಕೆಲಸಕ್ಕೆ ಶಾಲೆಯ ಶಿಕ್ಷಕರು, ಪಾಲಕರು ಬೆನ್ನೆಲುಬಾಗಿ ನಿಂತಿದ್ದಾರೆ. ಜನವರಿಯಲ್ಲಿ ನಡೆಯಲಿರುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆ ಅನಿಸುತ್ತದೆ ಎನ್ನುತ್ತಾನೆ ವಿದ್ಯಾರ್ಥಿ ಆರ್.ಕೆ.ಅಭಿನಂದನ್.