ನ್ಯೂಸ್

ಲೋಕಲ್ ಎಲೆಕ್ಷನ್ ಅಖಾಡದಲ್ಲಿ ಬ್ಯೂಟಿ ಕ್ವೀನ್: ಚುನಾವಣಾ ಕಣಕ್ಕಿಳಿಯಲು ಕಾರಣವಾಯ್ತು ಈ ನಿಯಮ!

ಲಖನೌ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆ ಅಖಾಡಕ್ಕೆ ಬ್ಯೂಟಿ ಕ್ವೀನ್​ ಒಬ್ಬರು ಎಂಟ್ರಿ ನೀಡಿದ್ದಾರೆ. 2015ರ ಸೌಂದರ್ಯ ಸ್ಪರ್ಧೆಯ ರನ್ನರ್​ ಅಪ್​ ಮಾಡೆಲ್​ ದೀಕ್ಷಾ ಸಿಂಗ್​ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದಾರೆ.

ದೀಕ್ಷಾ ಅವರು ಉತ್ತರ ಪ್ರದೇಶದ ಜೌನ್​ಪುರ್​ ಜಿಲ್ಲೆಯ ಬಕ್ಷಾ ಡೆವಲಪ್​ಮೆಂಟ್​ ಬ್ಲಾಕ್​ 26 ವಾರ್ಡ್​ನಿಂದ ಸ್ಪರ್ಧಿಸಲಿದ್ದಾರೆ. ಚುನಾವಣಾ ಅಖಾಡಕ್ಕೆ ದೀಕ್ಷಾ ಎಂಟ್ರಿಗ ಕೊಡಲು ಅವರ ಅವರ ತಂದೆಯೇ ಕಾರಣ. ತಾವು ಸ್ಪರ್ಧಿಸಬೇಕಿದ್ದ ಕ್ಷೇತ್ರ ಮಹಿಳಾ ಮೀಸಲು ಆಗಿದ್ದರಿಂದ ದೀಕ್ಷಾ ತಂದೆ ತಮ್ಮ ಮಗಳನ್ನೇ ಕಣಕ್ಕೆ ಇಳಿಸಿದ್ದಾರೆ.

ದೀಕ್ಷಾ ತಂದೆ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಬೇಕೆಂದು ಬಹಳ ದಿನಗಳಿಂದ ತಯಾರಿ ಮಾಡಿಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ಕ್ಷೇತ್ರ ಮಹಿಳಾ ಮೀಸಲು ಆದ್ದರಿಂದ ದೀಕ್ಷಾರನ್ನು ಮನವೊಲಿಸಿ ಚುನಾವಣೆಗೆ ನಿಲ್ಲಿಸಿದ್ದಾರೆ.

ದೀಕ್ಷಾ ಅವರು ಬಿಜೆಪಿ ನಾಯಕ ದಿವಂಗತ ರಾಮ್​ ಚಂದ್ರ ಸಿಂಗ್​ ಅವರ ಸೊಸೆ ಶಾಲಿನಿ ಸಿಂಗ್​ ವಿರುದ್ಧ ಕಣಕ್ಕಿಳಿದಿದ್ದಾರೆ. ಜೌನ್​​ಪುರದ ಮೊದಲ ಹಂತದ ಪಂಚಾಯಿತಿ ಚುನಾವಣೆ ಏಪ್ರಿಲ್​ 15ರಂದು ನಡೆಯಲಿದೆ.

ಅಂದಹಾಗೆ ದೀಕ್ಷಾ ಅವರ ತಂದೆ ಜೀತೆಂದ್ರ ಸಿಂಗ್​ ಗೋವಾ ಮತ್ತು ರಾಜಸ್ಥಾನದಲ್ಲಿ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಇನ್ನು ದೀಕ್ಷಾ "ರಬ್ಬಾ ಮೆಹನ್​ ಕರಿ" ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಕಂಪನಿಗಳಲ್ಲೂ ಸಹ ದೀಕ್ಷಾ ಕೆಲಸ ಮಾಡಿದ್ದಾರೆ. ಇದೀಗ ಚುನಾವಣೆ ಅಖಾಡಕ್ಕೆ ಧುಮುಕಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್​)