ನ್ಯೂಸ್

ಮಾಲ್ಡೀವ್ಸ್​ನಲ್ಲಿ 1 ಪಿಜ್ಜಾ ಖರಿದೀಸುವ ದುಡ್ಡಲ್ಲಿ ಭಾರತದಲ್ಲಿ ಚಿನ್ನವನ್ನೇ ಕೊಳ್ಳಬಹುದು!

ನವದೆಹಲಿ: ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿ ಬಂದಾಗಿನಿಂದ ಮಾಲ್ಡೀವ್ಸ್​ನ ರಾಜಕೀಯ ನಾಯಕರ ಹೊಟ್ಟೆಗೆ ಹುಳ ಬಿಟ್ಟಂತಾಗಿದೆ. ಲಕ್ಷದ್ವೀಪದ ಸೌಂದರ್ಯವನ್ನು ಸವಿದು ಅಲ್ಲಿನ ಪ್ರವಾಸೋದ್ಯಮ ಬಗ್ಗೆ ಮೋದಿ ಪ್ರಚಾರ ಮಾಡಿದ್ದೇ ತಡ ಮಾಲ್ಡೀವ್ಸ್​ನಲ್ಲಿ ಬೆಂಕಿ ಹೊತ್ತಿಕೊಂಡಿತು. ಏಕೆಂದರೆ, ಮಾಲ್ಡೀವ್ಸ್​ನ ಇಡೀ ಆದಾಯ ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಅದರಲ್ಲೂ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಾರೆ.

ಯಾವಾಗ ಮೋದಿ ಲಕ್ಷದ್ವೀಪಕ್ಕೆ ಹೊಗಿ ಬಂದರೋ ಇದನ್ನು ಅರಗಿಸಿಕೊಳ್ಳಲಾಗದೇ ಭಾರತ ಮತ್ತು ಮೋದಿ ಬಗ್ಗೆ ಮಾಲ್ಡೀವ್ಸ್ ರಾಜಕೀಯ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು. ನಮ್ಮ ದೇಶ ಹಾಗೂ ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡಿದ ಮಾಲ್ಡೀವ್ಸ್​ ವಿರುದ್ಧ ಸೆಲೆಬ್ರಿಟಿಗಳು ತಿರುಗಿಬಿದ್ದಿದ್ದು, ಇದರ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್​ ಮಾಲ್ಡೀವ್ಸ್​ ಅಭಿಯಾನ ಸಹ ಶುರುವಾಗಿದೆ. ಈ ಅಭಿಯಾನಕ್ಕೆ ಮಾಡಲ್​ ಕಂ ನಟಿ ಪೂನಂ ಪಾಂಡೆ ಸಹ ಕೈಜೋಡಿಸಿದ್ದಾರೆ.

ಶೂಟ್​ ಮಾಡುವುದಿಲ್ಲ

ಇನ್ಮುಂದೆ ನಾನೆಂದಿಗೂ ಭೇಟಿ ನೀಡುವುದಿಲ್ಲ ಎಂದು ಪೂನಂ ಪಾಂಡೆ ಈಗಾಗಲೇ ಘೋಷಣೆ ಮಾಡಿದ್ದಾರೆ. ಮಾಲ್ಡೀವ್ಸ್‌ಗೆ ತನ್ನ ಕೆಲಸದ ಪ್ರವಾಸವನ್ನು ರದ್ದುಗೊಳಿಸಿದ್ದೇನೆ. ನನಗೆ ಮಾಲ್ಡೀವ್ಸ್​ನಲ್ಲಿ ಶೂಟ್​ ಮಾಡುವುದು ಎಂದರೆ ಇಷ್ಟ. ಆದರೆ ಇನ್ನು ಮುಂದೆ ಮಾಲ್ಡೀವ್ಸ್‌ನಲ್ಲಿ ಶೂಟ್ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ನಾನು ಮತ್ತೆ ಮಾಲ್ಡೀವ್ಸ್‌ನಲ್ಲಿ ಶೂಟ್ ಮಾಡುವುದಿಲ್ಲ. ನನ್ನ ಮುಂದಿನ ಚಿತ್ರೀಕರಣವನ್ನು ಮಾಲ್ಡೀವ್ಸ್‌ನಲ್ಲಿ ಮಾಡಲು ಯೋಜಿಸಿದಾಗ, ಈ ಶೂಟಿಂಗ್ ಮಾಲ್ಡೀವ್ಸ್‌ನಲ್ಲಿ ಇತ್ತು ನಾನು ಬರುವುದಿಲ್ಲ ಎಂದು ನನ್ನ ತಂಡಕ್ಕೆ ಹೇಳಿದೆ. ಅದೃಷ್ಟವಶಾತ್, ಅವರು ಒಪ್ಪಿಕೊಂಡರು ಮತ್ತು ಈಗ ಲಕ್ಷದ್ವೀಪ್‌ನಲ್ಲಿ ಚಿತ್ರೀಕರಣ ಮಾಡಲು ಆಶಿಸುತ್ತೇನೆ ಎಂದಿದ್ದಾರೆ.

ಪಿಜ್ಜಾ ದುಬಾರಿ

ತಾಜಾ ಸಂಗತಿ ಏನೆಂದರೆ, ಮಾಲ್ಡೀವ್ಸ್​ನಲ್ಲಿ ಪಿಜ್ಜಾ ಬೆಲೆಯ ವಿರುದ್ಧ ಪೂನಂ ಪಾಂಡೆ ಅಸಮಧಾನ ಹೊರಹಾಕಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪೂನಂ ಪಾಂಡೆ, ಮಾಲ್ಡೀವ್ಸ್​ನಲ್ಲಿ ಒಂದು ಪಿಜ್ಜಾ ಬೆಲೆ 5 ಸಾವಿರ ರೂ. ಇದೆ. ಅಷ್ಟು ದುಡ್ಡು ಕೊಟ್ಟು ಯಾಕೆ ತಿನ್ನಬೇಕು? ಅಲ್ಲಿ ತಿನ್ನುವ ಬದಲು ನಮ್ಮಲ್ಲೇ ಪಿಜ್ಜಾ ತಿನ್ನುವುದು ಉತ್ತಮ. ರುಚಿಯಲ್ಲಿ ಏನೂ ವ್ಯತ್ಯಾಸ ಇರುವುದಿಲ್ಲ. ನಮ್ಮಲ್ಲಿ ಬೆಲೆಯು ಕೂಡ ಕಡಿಮೆ ಎಂದಿದ್ದಾರೆ. ಮಾಲ್ಡೀವ್ಸ್​ನಲ್ಲಿ 1 ಪಿಜ್ಜಾ ಖರಿದೀಸುವ ದುಡ್ಡಲ್ಲಿ ಭಾರತದಲ್ಲಿ 1 ಗ್ರಾಂ ಚಿನ್ನವನ್ನೇ ಕೊಳ್ಳಬಹುದಾಗಿದೆ.

ಏನಿದು ವಿವಾದ?

ಕಡಲತಡಿಯ ಪ್ರವಾಸೋದ್ಯಮವನ್ನೇ ದೊಡ್ಡ ಆದಾಯವಾಗಿ ಹೊಂದಿರುವ ಮಾಲ್ದೀವ್ಸ್, ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಗಿದೆ.

ಮೂವರು ಸಚಿವರ ಅಮಾನತು

ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ. (ಏಜೆನ್ಸೀಸ್​)